ಮುಂಬೈ: ಎರಡು ಹುಲಿಗಳ ನಡುವೆ ಸಿಕ್ಕಿಹಾಕಿಕೊಂಡ ಬೈಕ್ ಸವಾರರಿಬ್ಬರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಕುರಿತ ವಿಡಿಯೋ ಒಂದು ವೈರಲ್ ಆಗಿದ್ದು, ನಾಲ್ಕು ನಿಮಿಷಗಳ ಅವಧಿಯ ಈ ದೃಶ್ಯಗಳಲ್ಲಿ ಬೈಕ್ ಸವಾರರ ಮುಂದೆ ಹಾಗೂ ಹಿಂದೆ ಏಕಕಾಲದಲ್ಲಿ ಹುಲಿಗಳು ಪ್ರತ್ಯಕ್ಷವಾಗಿದೆ. ಹುಲಿಗಳ ನಡುವೆ ಸಿಕ್ಕ ಬೈಕ್ ಸವಾರರು ಅಲ್ಲಿಂದ ಓಡಲು ಯತ್ನಿಸದೆ ಭಯದಿಂದ ಅಲುಗಾಡದೇ ನಿಂತಿದ್ದಾರೆ. ಆದರೆ ಬೈಕ್ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಮಾತ್ರ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.
ಈ ವೇಳೆ ಎರಡು ಹುಲಿಗಳು ಬೈಕ್ ಸಮೀಪ ತೆರಳಿ ಘರ್ಜಿಸಿವೆ, ನಂತರ ಕೆಲ ನಿಮಿಷಗಳ ಕಾಲ ಬೈಕ್ ಸುತ್ತಲು ಗಂಭೀರ್ಯದಿಂದ ನಡೆದಾಡಿದೆ. ಹುಲಿಗಳು ನಡೆದಾಡುವ ವೇಳೆ ಕಾರೊಂದು ಬಂದಿದ್ದು, ಕಾರಿನಲ್ಲಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಈ ಎಲ್ಲ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಕೊನೆಗೆ ಕಾರನ್ನು ಸವಾರರ ಬಳಿ ವೇಗವಾಗಿ ಚಲಾಯಿಸುವ ಮೂಲಕ ಅವರನ್ನು ರಕ್ಷಿಸಿದ್ದಾನೆ.

ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಮಾಧ್ಯಮಗಳು ನಾಗ್ಪುರದ ಉಮ್ರೆಡ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಮಾಡಿವೆ.
ವಿಶ್ವದಲ್ಲಿ ಭಾರತ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದ್ದು, 2014 ರ ಹುಲಿ ಗಣತೀಯ ಪ್ರಕಾರ ದೇಶದಲ್ಲಿ 2,226 ಹುಲಿಗಳು ವಾಸಿಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 500 ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. 2019 ಮಧ್ಯದ ವೇಳೆಗೆ ಹುಲಿಗಳ ಸಂಖ್ಯೆ 3,000 ಸಾವಿರ ದಾಟುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಂದಾಜಿಸಿದೆ.




Leave a Reply