ಭಾರತದೊಂದಿಗಿನ ಯುದ್ಧದಲ್ಲಿ ಪಾಕ್ ಸೋಲುತ್ತೆ: ಇಮ್ರಾನ್ ಖಾನ್

ಇಸ್ಲಾಮಾಬಾದ್: ಭಾರತಕ್ಕೆ ಪರಮಾಣು ಬಾಂಬ್ ದಾಳಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಈಗ ಸೋಲಿನ ಭಯ ಶುರುವಾಗಿದೆ. ಭಾರತದೊಂದಿಗೆ ಯುದ್ಧ ಮಾಡಿದರೆ ನಾವು ಸೋಲುತ್ತೇವೆ ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿ ಅಲ್ ಜಜೀರಾ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಬಾರಿ ಭಾರತದೊಂದಿಗಿನ ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ತಾನ ಸೋಲಬಹುದು. ಯುದ್ಧದಲ್ಲಿ ಸೋತರೂ ಭಾರತವು ಅದರಿಂದಾಗುವ ಘನಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ ಅವರು, ಉಭಯ ದೇಶಗಳ ನಡುವೆ ಪರಮಾಣು ಯುದ್ಧದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

ಭಾರತ-ಪಾಕ್ ನಡುವೆ ಯುದ್ಧವೊಂದೇ ಪರಿಹಾರವಾದರೆ ನಾವು ನಮ್ಮ ಘನತೆಗಾಗಿ, ಸ್ವಾತಂತ್ರ್ಯಕ್ಕಾಗಿ ಕೊನೆವರೆಗೂ ಹೋರಾಡುತ್ತೇವೆ. ಆದ್ದರಿಂದ ಪರಮಾಣು ಶಕ್ತಿ ಹೊಂದಿರುವ ಎರಡು ದೇಶಗಳು ಹೋರಾಡಿದಾಗ, ಅದು ತನ್ನದೇ ಆದ ಘೋರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ನಾನು ಯಾವಾಗಲೂ ಯುದ್ಧವನ್ನು ವಿರೋಧಿಸುತ್ತೇನೆ. ಯುದ್ಧವು ಯಾವುದೇ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಅದು ವಿಯೆಟ್ನಾಂ ಅಥವಾ ಇರಾಕ್ ಯುದ್ಧವಾಗಿರಲಿ, ಯುದ್ಧದಿಂದ ಅನೇಕ ಸಮಸ್ಯೆಗಳು ಉದ್ಭವಿಸಿವೆ. ಪಾಕಿಸ್ತಾನವು ಎಂದಿಗೂ ಪರಮಾಣು ಯುದ್ಧವನ್ನು ಪ್ರಾರಂಭಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಇತ್ತೀಚೆಗಷ್ಟೇ ಭಾರತದೊಂದಿಗಿನ ಯುದ್ಧದ ಬಗ್ಗೆ ಹೇಳಿಕೆ ನೀಡಿದ್ದರು. ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಈಗ ನಾನು ಭಾರತದೊಂದಿಗೆ ಏನನ್ನೂ ಚರ್ಚಿಸುವುದಿಲ್ಲ, ಏಕೆಂದರೆ ಮಾತನಾಡಲು ಏನೂ ಉಳಿದಿಲ್ಲ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *