ಮುಂದಿನ 24 ಗಂಟೆ ಕೇರಳದಲ್ಲಿ ಭಾರೀ ಮಳೆಯ ಮನ್ಸೂಚನೆ

– ಕರ್ನಾಟಕದ 7 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

ತಿರುವನಂತಪುರಂ/ಬೆಂಗಳೂರು: ಮುಂದಿನ 24 ಗಂಟೆ ಕೇರಳದಲ್ಲಿ (Kerala Rain) ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.

ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಧ್ಯ ಮತ್ತು ಉತ್ತರ ಕೇರಳದಾದ್ಯಂತ ಭಾರೀ ಮಳೆಯಾಗಿದೆ.

ಕೇರಳದಲ್ಲಿ ಪೂರ್ವ ಮುಂಗಾರು ಅಬ್ಬರ ಜೋರಾಗಿದ್ದು, ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಚ್ಚಿಯ ಐಟಿ ಟೆಕ್ ಪಾರ್ಕ್ ಜಲಾವೃತ ಗೊಂಡಿದೆ. ಆಫೀಸ್ ಒಳಭಾಗದಲ್ಲಿ ನೀರು ನಿಂತಿದ್ದು, ಪರಿಣಾಮ ಟೆಕ್ಕಿಗಳು ಪರದಾಡಿದ್ದಾರೆ. ಇನ್ನು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಮುಂಭಾಗ ಕೂಡ ಜಲಾವೃತವಾಗಿದೆ. ಅಂಗಡಿಗಳಿಗೂ ನೀರು ನುಗ್ಗಿ ಅಸ್ತವ್ಯಸ್ತವಾಗಿತ್ತು.

ಪಾಲಕ್ಕಾಡ್ ಕಲ್ಲಡಿಕೋಡ್ ಎಂಬಲ್ಲಿ ಸಿಡಿಲು ಬಡಿದು ಮನೆಯ ಮೇಲ್ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಕರಿಂಬಾ ಅಯ್ಯಪ್ಪನಕೋಟ ಮಂಪುರಂ ನಿವಾಸಿ ಕಣ್ಣನ್ ಎಂಬವರ ಮನೆ ಬೆಂಕಿಗೆ ಆಹುತಿಯಾಗಿದೆ. ಮಂಪುರಂ ಮೂಲದ ರೆಗಿ ಮತ್ತು ಅವರ ಕುಟುಂಬ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿದ್ದ ಕಪಾಟುಗಳು, ಬೆಡ್‍ಗಳು ಇತ್ಯಾದಿಗಳು ಸುಟ್ಟು ಹೋಗಿವೆ. ಕೂಡಲೇ ಎಚ್ಚೆತ್ತ ಕಾರಣ ಭಾರೀ ಅವಘಡವನ್ನು ತಪ್ಪಿಸಲಾಗಿತ್ತು.

ಅತಿ ಹೆಚ್ಚು ಮಳೆ ದಾಖಲಾಗಿರುವ ಪ್ರದೇಶ: ಕುನ್ನಮಂಗಲಂ: 197 ಮಿ.ಮೀ, ಕುಮರಕೊಂ: 158ಮಿ.ಮೀ, ತೈಕಟ್ಟುಸ್ಸೆರಿ: 156 ಮಿ.ಮೀ, ಪಲ್ಲುರುತಿ: 127ಮಿ.ಮೀ, ಚೂಂಡಿ: 108 ಮಿ.ಮೀ, ತೆನ್ನಾಲ: 107 ಮೀ.ಮೀ., ಪರವೂರು 100 ಮಿ.ಮೀ, ಕಲಮಸ್ಸೆರಿ: 82 ಮಿ.ಮೀ ಹಾಗೂ ಇರಕ್ಕೂರ್: 80 ಮಿ.ಮೀ ಮಳೆಯಾಗಿದೆ.

ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ: ಇತ್ತ ಕರ್ನಾಟಕದ 7 ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಜಿಲ್ಲೆಗಳಿಗೆ ಮಳೆಯಾಗುವ ಸಂಭವವಿದೆ. ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ. ಸುಮಾರು 30 ರಿಂದ 40 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.