ಜಾನುವಾರುಗಳ ಅಕ್ರಮ ಸಾಗಣೆ – ವ್ಯಕ್ತಿಗೆ ಗ್ರಾಮಸ್ಥರಿಂದ ಗೂಸಾ

– ಬಿಟ್ಟು ಬಿಡಿ ಎಂದು ಕೈಮುಗಿದು ಅಂಗಲಾಚಿದ ವ್ಯಕ್ತಿ

ಧಾರವಾಡ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಎರಡು ಕ್ಯಾಂಟರ್ ಗಳನ್ನು ಗೋವು ರಕ್ಷಕರು ತಡೆದು, ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸದ್ದಾಂ ಶೇಖ್ ಹಲ್ಲೆಗೊಳಗಾದ ವ್ಯಕ್ತಿ. ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಹೊರಗೆ ಘಟನೆ ನಡೆದಿದ್ದು, ಕ್ಯಾಂಟರ್ ಚಾಲಕರು ಪರಾರಿಯಾಗಿದ್ದಾರೆ. ಆದರೆ ಕ್ಯಾಂಟರ್ ನಲ್ಲಿದ್ದ ಸದ್ದಾಂ ಶೇಖ್ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ಹಲ್ಲೆಗೆ ಒಳಾಗಿದ್ದಾನೆ.

ಆಗಿದ್ದೇನು?:
ನರೇಂದ್ರ ಗ್ರಾಮದ ಗೋವು ರಕ್ಷಕ ತಂಡದ ಯುವಕರಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಸವದತ್ತಿ-ಧಾರವಾಡ ಮಾರ್ಗದಲ್ಲಿ ಜಮಾಯಿಸಿದ ಯುವಕರು, ಕ್ಯಾಂಟರ್ ಗಳ ಮೇಲೆ ಕಲ್ಲು ತೂರಿದರು. ಇದರಿಂದ ಗಾಬರಿಗೊಂಡ ಚಾಲಕರು ಹಾಗೂ ಸಹಾಯಕರು ಕ್ಯಾಂಟರ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಕ್ಯಾಂಟರ್ ಒಂದರಲ್ಲಿ ಕುಳಿತಿದ್ದ ಸದ್ದಾಂ ಶೇಖ್ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆಳಿಗೆ ಒಂದು ಎಂಬಂತೆ ಗ್ರಾಮಸ್ಥರು ಸದ್ದಾಂಗೆ ಥಳಿಸಿದ್ದಾರೆ. ನಿಮ್ಮದು ಯಾವ ಊರು? ಹಸುಗಳನ್ನು ಎಲ್ಲಿಗೆ ಸಾಗಿಸುತ್ತಿದ್ದೀರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಆತ, ನಾನು ಸದ್ದಾಂ ಶೇಖ್. ಹಸುಗಳನ್ನು ಎಲ್ಲಿಗೆ ಸಾಗಿಸುತ್ತಿದ್ದಾರೆ ಅಂತ ಗೊತ್ತಿಲ್ಲ. ನಾನು ಹುಬ್ಬಳ್ಳಿಗೆ ಹೋಗುತ್ತಿದ್ದೆ. ಹೀಗಾಗಿ ಈ ವಾಹನದಲ್ಲಿ ಬಂದಿದ್ದೇನೆ. ದಯವಿಟ್ಟು ಹೊಡಿಬೇಡಿ. ನನ್ನ ಬಿಟ್ಟು ಬಿಡಿ ಎಂದು ಯುವಕರಿಗೆ ಅಂಗಲಾಚಿ ಬೇಡಿಕೊಂಡಿದ್ದಾನೆ.

ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿಎಸ್‍ಪಿ ರಾಮನಗೌಡ ಅವರು ಪರಿಸ್ಥಿತಿ ತಿಳಿಗೊಳಿಸಿದರು. ಸದ್ದಾಂ ಶೇಖ್, ಎರಡೂ ಕ್ಯಾಂಟರ್ ಹಾಗೂ ಅವುಗಳಲ್ಲಿದ್ದ ಎಮ್ಮೆ, ಆಕಳು, ಎತ್ತು ಸೇರಿದಂತೆ 40 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *