ಲಾಕ್‍ಡೌನ್ ಮಧ್ಯೆ ಯಾದಗಿರಿಯಲ್ಲಿ ಅಕ್ರಮ ಮರಳು ದಂಧೆ ಬಲು ಜೋರು

ಯಾದಗಿರಿ: ಇಡೀ ಜಗತ್ತಿಗೆ ಒಂದು ಚಿಂತೆಯಾದ್ರೆ ಯಾದಗಿರಿ ಅಕ್ರಮ ದಂಧೆಕೋರರಿಗೆ ಒಂದು ಚಿಂತೆಯಾಗಿದೆ. ಯಾಕೆಂದರೆ ಇಡೀ ವಿಶ್ವವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸುತ್ತಿದೆ. ಮನುಷ್ಯ ಹಣಕ್ಕಿಂತ ಆರೋಗ್ಯ ಮುಖ್ಯ ಅಂತ ನಂಬುವಂತಾಗಿದೆ. ಆದರೆ ಯಾದಗಿರಿಯಲ್ಲಿ ಅಕ್ರಮವಾಗಿ ದುಡ್ಡು ಮಾಡುವ ನೀಚ ಮನಸ್ಸುಗಳು ಮಾತ್ರ ಕಡಿಮೆಯಾಗಿಲ್ಲ.

ಕೊರೊನಾ ಲಾಕ್‍ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಇದನ್ನು ತಡೆಯಬೇಕಿದ್ದ ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಈ ಬಗ್ಗೆ ತಿಳಿದಿದ್ದರೂ, ಕಂಡು ಕಾಣದಂತೆ ಇರುವುದು ಜಿಲ್ಲೆಯ ಜನರ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಳ್ಳ, ಸೂಗುರು ಸೇರಿದಂತೆ ಕೃಷ್ಣನದಿ ದಡದಿಂದ ರಾತ್ರೋರಾತ್ರಿ ಅಕ್ರಮವಾಗಿ ಮರಳು ತುಂಬಿಸಿಕೊಳ್ಳುವ ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಗಳು ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಕಡೆ ಸಂಚಾರ ಮಾಡುತ್ತಿವೆ. ಲಾಕ್‍ಡೌನ್‍ನಲ್ಲಿ ಜನ ಸಾಮಾನ್ಯರನ್ನು ರಸ್ತೆಗಿಳಿಯಲು ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ಇಂತಹ ಹೊತ್ತಿನಲ್ಲಿ ತಾಲೂಕು ಕೇಂದ್ರವನ್ನು, ವಿವಿಧ ಚೆಕ್‍ಪೋಸ್ಟ್ ಗಳನ್ನು ದಾಟಿ ಈ ಮರಳು ವಾಹನಗಳು ಹೇಗೆ ತಿರುಗಾಡುತ್ತಿವೆ ಎನ್ನುವುದು ತಿಳಿಯದ ಯಕ್ಷ ಪ್ರಶ್ನೆಯಾಗಿದೆ.

ಇದನ್ನು ತಡೆಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ತಹಶೀಲ್ದಾರ್ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Comments

Leave a Reply

Your email address will not be published. Required fields are marked *