ರಾಮಲಿಂಗಂ ಕಂಪನಿಯಿಂದ ರಾಜ್ಯದ ಸಂಪತ್ತು ಲೂಟಿ- ಅಕ್ರಮವಾಗಿ ಬೆಟ್ಟವನ್ನೇ ಅಗೆದು ಕರಗಿಸಿದ್ರು

ಚಿಕ್ಕಬಳ್ಳಾಪುರ: ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿ. ತಮಿಳುನಾಡು ಮೂಲದ ದೊಡ್ಡ ಕಂಪನಿ. ರಸ್ತೆ ಮಾಡ್ತಿದ್ದೇವೆ, ರಸ್ತೆಗೆ ಬೇಕಾದ ಕಲ್ಲು ಪುಡಿ ತಯಾರಿ ಘಟಕ ಮಾಡಲು ಘಟಕ ಸ್ಥಾಪನೆಗೆ ಸ್ವಲ್ಪ ಜಾಗ ಕೊಡಿ ಅಂತ ಗೋಮಾಳದ ಜಾಗ ಪಡೆದಿತ್ತು. ಆದ್ರೆ ಕಲ್ಲು ಪುಡಿ ಘಟಕ ಆರಂಭ ಮಾಡಿದ ಕಂಪನಿ ಆ ಜಾಗದ ಪಕ್ಕದಲ್ಲೇ ಇದ್ದ ಬೃಹತ್ ಬೆಟ್ಟವನ್ನೇ ಅಕ್ರಮವಾಗಿ ಕರಗಿಸಿಬಿಟ್ಟಿದೆ.

ಇದು ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆ ಬಸವನಹಳ್ಳಿಯ ಸರ್ವೆ ನಂ 37ರ ಗೋಮಾಳ ಜಮೀನಿನಲ್ಲಿ. ಯಲಹಂಕದಿಂದ-ಚಿಕ್ಕಬಳ್ಳಾಪುರ ಜಿಲ್ಲೆಯ ಕುಡಮಲಕುಂಟೆ ಕೈಗಾರಿಕಾ ಪ್ರದೇಶದವರೆಗಿನ ರಾಜ್ಯ ಹೆದ್ದಾರಿ 9ರ ನಿರ್ಮಾಣ ಕಾರ್ಯವನ್ನ ಗುತ್ತಿಗೆ ಪಡೆದಿರೋ ರಾಮಲಿಂಗಂ ಕಂಪನಿ, ಗೋಮಾಳದ ಭೂಮಿಯಲ್ಲಿ ಜಲ್ಲಿ ಕಲ್ಲು ಪುಡಿ ಘಟಕ ಸ್ಥಾಪನೆಗೆ ತಾತ್ಕಾಲಿಕ ಅನುಮತಿ ಪಡೆದಿದೆ. ಜೊತೆಗೆ ಗೋಮಾಳದ ಪಕ್ಕದಲ್ಲೇ ಇದ್ದ ಬೃಹತ್ ಬೆಟ್ಟವನ್ನೇ ಅಕ್ರಮವಾಗಿ ನುಂಗಿಬಿಟ್ಟಿದೆ. ಈ ಮೂಲಕ ಕೋಟಿ ಕೋಟಿ ಸಂಪತ್ತನ್ನು ಕೊಳ್ಳೆ ಹೊಡೆದಿದೆ.

ಇನ್ನು ತಾತ್ಕಾಲಿಕ ಪರವಾನಗಿ ಅವಧಿ ಮುಗಿದು 2 ತಿಂಗಳಾಗುತ್ತಾ ಬಂದಿದ್ರೂ ಆರ್‍ಸಿಸಿಎಲ್ ಕಂಪನಿ ಅಕ್ರಮವಾಗಿ ರಾಜಾರೋಷವಾಗಿ ಲೂಟಿ ಮುಂದುವರೆಸಿದೆ. ಜೊತೆಗೆ ಇದೇ ಜಾಗದಲ್ಲಿ ಕ್ವಾರಿಗೆ ಅನುಮತಿ ನೀಡಿ ಅಂತ ಸರ್ಕಾರದ ಕಡೆಯಿಂದ ನೋಟಿಫಿಕೇಷನ್ ಮಾಡಿಸಿಕೊಂಡಿದೆ. ಆದ್ರೆ ಅದರ ಕಾರ್ಯಾದೇಶ ಪಡೆದಿಲ್ಲ. ಆದ್ರೂ ಕ್ವಾರಿ ಕಾಮಗಾರಿ ನಡೆಸ್ತಿದೆ.

ಅವಧಿ ಮುಗಿದ ಕಾರಣ ಕಲ್ಲು ಪುಡಿ ಘಟಕ ಸ್ಥಗಿತಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದ್ರೂ ಕಲ್ಲು ಪುಡಿ ಘಟಕ ನಿಂತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತೆರಳಿದ ಪಬ್ಲಿಕ್ ಟಿವಿ ಸಿಬ್ಬಂದಿಗೆ ಆರ್‍ಸಿಎಲ್ ಕಡೆಯವ್ರು ಹಾಕಿದ್ದು ಅಪ್ಪಟ ಧಮಕಿ.

ಗ್ರಾಮಪಂಚಾಯ್ತಿಯಿಂದ ಹಿಡಿದು ಸರ್ಕಾರದ ಮಟ್ಟದವರೆಗೂ ಎಲ್ರಿಗೂ ರಾಮಲಿಂಗಂ ಕಂಪನಿ ಅಕ್ರಮದ ಬಗ್ಗೆ ಗೊತ್ತಿದೆ. ಆದ್ರೆ ಯಾರು ತುಟಿ ಬಿಚ್ತಾನೆ ಇಲ್ಲ.

Comments

Leave a Reply

Your email address will not be published. Required fields are marked *