ಬೆಂಗಳೂರಿನ ಐಐಎಸ್‍ಸಿ ದೇಶದಲ್ಲೇ ನಂ.1 ವಿವಿ: ಪಟ್ಟಿಯಲ್ಲಿ ಕರ್ನಾಟಕದ ಯಾವ ವಿವಿಗೆ ಯಾವ ಸ್ಥಾನ?

ನವದೆಹಲಿ: ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ಎರಡನೇ ಬಾರಿ ಮೊದಲ ಶ್ರೇಯಾಂಕವನ್ನು ಪಡೆದುಕೊಂಡಿದೆ.

ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಶಾಸ್ತ್ರೀ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಚೆನ್ನೈ ನಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಮೂರನೇ ಸ್ಥಾನ ಪಡೆದುಕೊಂಡಿವೆ.

ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ 11ನೇ ಸ್ಥಾನ, ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ಗೆ 25 ಸ್ಥಾನ ಸಿಕ್ಕಿದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ಗೆ 30ನೇ ಶ್ರೇಯಾಂಕ, ಮೈಸೂರು ವಿವಿಗೆ 57ನೇ ಶ್ರೇಯಾಂಕ, ಸುರತ್ಕಲ್ ನಲ್ಲಿರುವ ಎನ್‍ಐಟಿಕೆಗೆ 65 ಶ್ರೇಯಾಂಕ, ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿವಿಗೆ 74ನೇ ಸ್ಥಾನ ಸಿಕ್ಕಿದೆ.

ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಐಐಎಂ ಅಹಮದಾಬಾದ್‍ಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಐಐಎಂ ಬೆಂಗಳೂರಿಗೆ ಎರಡನೇ ಸ್ಥಾನ ಸಿಕ್ಕಿದೆ. 2016ರಲ್ಲಿ ಪ್ರಕಟಗೊಂಡ ಪಟ್ಟಿಯಲ್ಲೂ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು.

ರಾಜ್ಯದ ಟಾಪ್ ವಿವಿಗಳು: ಶುಕ್ರವಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು `ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಯಾಂಕ ಚೌಕಟ್ಟು’ (ಕೆಎಸ್‍ಯುಆರ್‍ಎಫ್) ಸಿದ್ಧಪಡಿಸಿದ್ದ ಶ್ರೇಯಾಂಕ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಬಿಡುಗಡೆಗೊಳಿಸಿದ್ದರು.

10 ವರ್ಷಕ್ಕಿಂತ ಹಿಂದೆ ಆರಂಭವಾದ ವಿವಿಗಳ ಪಟ್ಟಿಯಲ್ಲಿ ಮಣಿಪಾಲ್ ವಿ.ವಿ 737 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಸಿಕ್ಕಿದ್ದರೆ, ಎರಡನೇ ಸ್ಥಾನದಲ್ಲಿ ಗುಲ್ಬರ್ಗ ವಿವಿ (557) ಮತ್ತು ಕೊನೆಯ ಸ್ಥಾನದಲ್ಲಿ ಮಂಗಳೂರು ವಿವಿ (428) ಇತ್ತು.

ಐದರಿಂದ ಹತ್ತು ವರ್ಷದೊಳಗೆ ಸ್ಥಾಪನೆಯಾದ ವಿ.ವಿಗಳ ಪಟ್ಟಿಯಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ (711) ಮೊದಲ ಸ್ಥಾನ ಸಿಕ್ಕಿತ್ತು. ಎರಡನೇ ಸ್ಥಾನದಲ್ಲಿ ಜೈನ್ ವಿಶ್ವವಿದ್ಯಾಲಯ (661) ಇದ್ದರೆ, ದಾವಣಗೆರೆ ವಿ.ವಿ ಕೊನೆಯ ಸ್ಥಾನ (279) ಪಡೆದಿದೆ. 5 ವರ್ಷದೊಳಗಿನ ವಿ.ವಿಗಳ ಪಟ್ಟಿಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಪ್ರಥಮ (617) ಮತ್ತು ರೈ ಟೆಕ್ನಾಲಜಿ ವಿ.ವಿ ಕೊನೆಯ (305) ಸ್ಥಾನದಲ್ಲಿದೆ.

ವಿಷಯಾಧಾರಿತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಧಾರವಾಡದ ಕೃಷಿ ವಿ.ವಿ ಪ್ರಥಮ (779), ಬೀದರ್‍ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದ್ವಿತೀಯ (656) ಹಾಗೂ ಜಾನಪದ ವಿಶ್ವವಿದ್ಯಾಲಯ ಕೊನೆ (289) ಸ್ಥಾನ ಸಿಕ್ಕಿತ್ತು.

Comments

Leave a Reply

Your email address will not be published. Required fields are marked *