ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ- ಕರಿಂಜೆ ಸ್ವಾಮೀಜಿಗೆ ಏಕವಚನದಲ್ಲೇ ಸವಾಲೆಸೆದ ಶಾಸಕ ಅಭಯಚಂದ್ರ ಜೈನ್

ಮಂಗಳೂರು: ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರು ಮೂಡಬಿದಿರೆಯ ಕರಿಂಜೆ ಮುಕ್ತಾನಂದ ಸ್ವಾಮೀಜಿ ಕುರಿತು ಪಕ್ಷದ ಕಾರ್ಯಕ್ರಮದಲ್ಲಿ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.

ತುಳುವಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೈನ್, ಅವಾ ಯಾರೋ ಒಬ್ಬ ಕರಿಂಜೆ ಸ್ವಾಮೀಜಿ ಭಾಷಣದಲ್ಲಿ ಹೇಳಿದನಂತೆ. ಒಬ್ಬ ರಾಕ್ಷಸ ಮುಖ್ಯಮಂತ್ರಿ ಇದ್ದಾನೆ. ಒಬ್ಬ ರಾಕ್ಷಸ ಎಂಎಲ್‍ಎ ಇದ್ದಾನೆ ಅಂತ. ನನಗೆ ಬೈಯಲಿ, ಅದು ಬಿಟ್ಟು ಮುಖ್ಯಮಂತ್ರಿಗೆ ಇನ್ನೊಮ್ಮೆ ಬೈದರೆ ಅವನು ಎಷ್ಟು ದೊಡ್ಡ ಸ್ವಾಮೀಜಿ ಆದರೂ ಬಿಡುವುದಿಲ್ಲ. ಅವನಿಗೆ ಕಪ್ಪು ಬಾವುಟ ಹಿಡಿಯುವಂತೆ ನಾನು ಮಾಡ್ತೇನೆ ಅಂತ ಹೇಳಿದ್ರು.

ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ. ಅವನು ಸರ್ಕಾರಿ ಜಾಗ ಕಬಳಿಸಿದ್ದಾನೆ. ಅದನ್ನು ತನಿಖೆ ಮಾಡಬೇಕು ಅಂತ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಅಂತ ಏಕವಚನದಲ್ಲಿ ನಿಂದಿಸಿ ಸವಾಲೆಸೆದಿದ್ದಾರೆ.

ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಗೆ ಬೈದ್ರೆ ನಾವು ಬಿಡಲ್ಲ. ದೊಡ್ಡ ಮಟ್ಟದ ಹೋರಾಟವೇ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಯಾರಿಗೂ ಅನ್ಯಾಯ ಮಾಡಿಲ್ಲ. ಬದಲಾಗಿ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಬಹಳ ಮುಖ್ಯವಾಗಿದೆ. ಈಗಾಗಲೇ ಕಾಂಗ್ರೆಸ್ ವಿರುದ್ಧ ಹಲವಾರು ಪಿತೂರಿಗಳು ನಡೆದಿದ್ದು, ಇದ್ಯಾವುದನ್ನೂ ನಾವು ಕೇರ್ ಮಾಡಲ್ಲ. ಅವುಗಳನ್ನೆಲ್ಲಾ ಎದುರಿಸುವ ಕೆಲಸ ಮಾಡುತ್ತೇವೆ ಅಂದ್ರು.

ಪ್ರತಾಪ್ ಚಂದ್ರ ಶೆಟ್ಟಿ ಅವರು ಹಿರಿಯ ಕಾಂಗ್ರೆಸ್ ಎಂಎಲ್‍ಎ ಹಾಗೂ ಎಂಎಲ್ ಸಿ ಆಗಿದ್ದರು. ಪ್ರಾಮಾಣಿಕ ವ್ಯಕ್ತಿಯಾಗಿರೋ ಅವರು ಇಂದಿಗೂ ಕುಂದಾಪುರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅವರೇ ವಿಧಾನಪರಿಷತ್ ಸದಸ್ಯರಾಗಬೇಕು ಅಂತ ಅವರು ಒತ್ತಾಯಿಸಿದರು.

ಕರಿಂಜೆ ಶ್ರೀ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ರಾಕ್ಷಸ ಸಿಎಂ ಮತ್ತು ರಾಕ್ಷಸ ಎಂಎಲ್‍ಎ ಎಂಬ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಇದೀಗ ಹಿಂದೂ ಸ್ವಾಮೀಜಿ ಬಗ್ಗೆ ಶಾಸಕ ಅಭಯಚಂದ್ರ ಹೇಳಿಕೆ ನೀಡಿರುವುದರ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗೆ ನಿರ್ಧಾರ ನಡೆಸಿವೆ.

Comments

Leave a Reply

Your email address will not be published. Required fields are marked *