ಹೆಗಡೆ, ನಳಿನ್ ವಿರುದ್ಧ ಕ್ರಮ ಯಾಕಿಲ್ಲ – ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಕಾರ್ಯಕರ್ತರು

ತುಮಕೂರು: ನಾಥುರಾಮ್ ಗೋಡ್ಸೆ ದೇಶಭಕ್ತ ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಕ್ಕೆ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನ ಕ್ರಮವನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾರ್ಯಕರ್ತರು, ನಳಿನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆಯಂತವರ ವಿರುದ್ಧ ಕ್ರಮ ಕೈಗೊಳ್ಳಲಾಗದ ನಾಯಕರು ನಿಷ್ಠಾವಂತ ಕಾರ್ಯಕರ್ತನ ಮೇಲೆ ಕ್ರಮ ಕೈಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಉಚ್ಚಾಟನೆ ಮಾಡಿದ್ದೀರಾ? ತಾಕತ್ತಿದ್ದರೆ ಅಂದಿನಿಂದಲೂ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಶಾಸಕರು, ಸಂಸದರ ವಿರುದ್ಧ ಕ್ರಮಕೈಗೊಳ್ಳಿ. ಬಿಜೆಪಿಯ ಷಂಡ ನಾಯಕರೇ ನಿಮ್ಮ ಬೊಗಳೆ ಹಿಂದುತ್ವ ಎಷ್ಟು ಸಾರಿ ಸಾಬೀತು ಮಾಡುತ್ತೀರಿ. ಹನುಮಂತರಾಜು ಹೇಳಿಕೆಗೆ ನಾವೆಲ್ಲ ಬದ್ಧ ಎಂದು ರಾಜ್ಯ ಬಿಜೆಪಿ ನಾಯಕರನ್ನು ತೆಗಳಿ ಪೋಸ್ಟ್ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತರಾಜು ಅವರು ತನ್ನ ಫೇಸ್‍ಬುಕ್‍ನಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರು ಅಪ್ರತಿಮ ದೇಶಭಕ್ತ ಎಂದು ಶುಕ್ರವಾರ ಪೋಸ್ಟ್ ಹಾಕಿದ್ದಾರು. ಅಷ್ಟೇ ಅಲ್ಲದೆ, ತನ್ನ ಅಸ್ಥಿಯನ್ನು ಸಿಂಧೂ ನದಿಯಲ್ಲಿ ವಿಸರ್ಜನೆ ಮಾಡಬೇಕು ಎಂದು ಮಹಾನ್ ರಾಷ್ಟ್ರಭಕ್ತ ಗೋಡ್ಸೆ ನೇಣಿನ ಕುಣಿಕೆಗೆ ತಲೆ ಕೊಟ್ಟ ಎಂದು ಮತ್ತೊಂದು ಪೋಸ್ಟ್ ಮಾಡಿದ್ದರು. ಈ ವಿಚಾರವಾಗಿ ಹನುಮಂತರಾಜು ಅವರನ್ನು ಬಿಜೆಪಿ ತನ್ನ ಪಕ್ಷದಿಂದ ವಜಾ ಮಾಡಿತ್ತು.

Comments

Leave a Reply

Your email address will not be published. Required fields are marked *