ಮಗ ತೆರಿಗೆ ಪಾವತಿಸಿದ್ದರೂ ತಾಯಿಗೆ ಸಿಗುತ್ತೆ 2 ಸಾವಿರ ರೂ.

ಬೆಂಗಳೂರು: ಮಗ ತೆರಿಗೆ (Tax) ಪಾವತಿಸುತ್ತಿದ್ದರೂ ತಾಯಿಯೂ ಗೃಹಲಕ್ಷ್ಮಿ (Gruhalakshmi) ಯೋಜನೆಯ ಫಲಾನುಭವಿ ಆಗುತ್ತಾಳೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ತಿಳಿಸಿದ್ದಾರೆ.

ಪತಿ ಮಾತ್ರವಲ್ಲ, ಮಗ ತೆರಿಗೆ ಪಾವತಿಸುತ್ತಿದ್ದರೂ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುರುವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾರ್ವಜನಿಕವಾಗಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿ ಜನಾಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡಿದ್ದಾರೆ.

 

ಗಂಡ ಟ್ಯಾಕ್ಸ್ ಕಟ್ಟಿದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಆದರೆ ಮಗ ಟ್ಯಾಕ್ಸ್ ಪಾವತಿಸುತ್ತಿದ್ದರೂ, ಜಿಎಸ್‍ಟಿ ಪಾವತಿ ಮಾಡುತ್ತಿದ್ದರೂ ತಾಯಿಗೆ ಮಾಸಿಕ 2000 ರೂಪಾಯಿ ಕೊಡುತ್ತೇವೆ ಎಂದು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟೀಕರಣ ನೀಡುವ ಮೂಲಕ ಅನಗತ್ಯ ಗೊಂದಲಕ್ಕೆ ತೆರೆ ಎಳೆಯಲು ನೋಡಿದ್ದಾರೆ. ಇದನ್ನೂ ಓದಿ: ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ – ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರಿಗೆ?

 

ಇದೇ ವೇಳೆ, ಟಿವಿ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಗೃಹಲಕ್ಷ್ಮಿ ಅರ್ಜಿಯ ನಮೂನೆ ನಕಲಿಯಲ್ಲ ಅದು ಅಸಲಿ ಎನ್ನುವುದು ಸ್ಪಷ್ಟವಾಗಿದೆ. ಇದರಲ್ಲಿನ ಜಾತಿ ಎಂಬ ಪದದ ಬದಲು ವರ್ಗ ಎನ್ನುವ ಪದವನ್ನು ಬಳಸುತ್ತೇವೆ. ಈ ಅರ್ಜಿಯಲ್ಲಿ ಕೆಲವೊಂದು ಅಂಶಗಳನ್ನು ಬದಲಾಯಿಸುತ್ತೇವೆ ಎಂದು ತಿಳಿಸಿದರು.