ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯವಾದ್ರೆ ತ್ಯಜಿಸುತ್ತೇನೆ: ಗಂಭೀರ್

ನವದೆಹಲಿ: ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯವಾದರೆ ಅದನ್ನು ತ್ಯಜಿಸುತ್ತೇನೆ ಎಂದು ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ವೈರಲ್ ಆಗಿರುವ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ ವಾರ ಭಾರತ-ಬಾಂಗ್ಲಾ ಟೆಸ್ಟ ಕ್ರಿಕೆಟ್ ವೇಳೆ ಗಂಭೀರ್ ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷಣ್ ಅವರ ಜೊತೆ ಜಿಲೇಬಿ ತಿನ್ನುತ್ತಿರುವ ಫೋಟೋ ವೈರಲ್ ಆಗಿತ್ತು. ಈಗ ಈ ಫೋಟೋ ಬಗ್ಗೆ ಗಂಭೀರ್ ಸಮರ್ಥನೆ ನೀಡಿದ್ದಾರೆ. “ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದರೆ ನಾನು ಶಾಶ್ವತವಾಗಿ ಜಿಲೇಬಿ ತಿನ್ನುವುದನ್ನು ಬಿಟ್ಟು ಬಿಡುತ್ತೇನೆ. 10 ನಿಮಿಷಗಳಲ್ಲಿ ನನ್ನನ್ನು ಟ್ರೋಲ್ ಮಾಡಲು ಶುರು ಮಾಡಿದ್ದೀರಿ, ಇದೇ ಪರಿಶ್ರಮವನ್ನು ಮಾಲಿನ್ಯ ಕಡಿಮೆ ಮಾಡಲು ಮಾಡಿದ್ದರೆ ನಾವು ಉಸಿರಾಡಬಹುದಿತ್ತು” ಎಂದು ಗಂಭೀರ್ ಹೇಳಿದ್ದಾರೆ.

ನಾನು ಮಾಲಿನ್ಯಕ್ಕಾಗಿ 5 ತಿಂಗಳು ಕೆಲಸ ಮಾಡಿದ್ದೇನೆ. ನಾನು ಮಾಲಿನ್ಯಕ್ಕಾಗಿ ಸ್ಪ್ರಿಂಕ್ಲರ್ ಮಿಶೀನ್, ವಾಕ್ಯೂಂ ಕ್ಲೀನರ್ ಖರೀದಿಸಿದ್ದೇನೆ. ಮಾಲಿನ್ಯ ವಿಷಯವನ್ನು ನಾನು ಹಾಗೂ ದೆಹಲಿ ಜನತೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆದರೆ ಆಮ್ ಆದ್ಮಿ ಪಕ್ಷದವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಮಾಲಿನ್ಯ ತಡೆಯಲು ಅವರು 5 ವರ್ಷದಲ್ಲಿ ಏನನ್ನೂ ಖರೀದಿಸಿದ್ದಾರೆ ಎಂದು ನೀವೇ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿ ಎಂದು ಗಂಭೀರ್ ಗರಂ ಆದರು.

ಸಭೆಯಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಪ್ರಶ್ನಿಸಿದಾಗ, ನಿಮಗೆ ಸಭೆ ಮುಖ್ಯನಾ? ನನ್ನ ಕೆಲಸ ಮುಖ್ಯವೇ? ನಾನು 5 ತಿಂಗಳಲ್ಲಿ ಮಾಡಿದ ಕೆಲಸವನ್ನು ಹೇಳಿದ್ದೇನೆ. ಹಾಗೆಯೇ ನೀವು 5 ವರ್ಷದಲ್ಲಿ ಅವರು ಮಾಡಿದ ಕೆಲಸವನ್ನು ಕೇಳಿ. 11 ರಂದು ಸಭೆ ಇದೆ ಎಂದು ನನಗೆ ಮೇಲ್ ಬಂದಾಗ ನನ್ನ ಕಾಂಟ್ರ್ಯಾಕ್ಟ್ ಇದೆ ಹಾಗೂ ನಾನು ಜನರಿಗೆ ಮನರಂಜನೆ ನೀಡಬೇಕು ಎಂದು ನಾನು ಅದೇ ದಿನ ಹೇಳಿದೆ. ಎಲ್ಲರೂ ಟ್ರೋಲ್ ಮಾಡುವುದನ್ನು ಬಿಟ್ಟು 5 ತಿಂಗಳು ನಾನು ಮಾಡಿದ ಕೆಲಸದ ಬಗ್ಗೆ ಮಾತನಾಡಿ ಎಂದರು.

ಇತ್ತೀಚೆಗೆ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ನವದೆಹಲಿಯ ಐಟಿಒ ಇಲಾಖೆಯ ಗೋಡೆ ಹಾಗೂ ಮರಗಳ ಮೇಲೆ ಅಂಟಿಸಲಾಗಿತ್ತು. ಪೋಸ್ಟರ್ ನಲ್ಲಿ, “ನೀವು ಗೌತಮ್ ಗಂಭೀರ್ ಅವರನ್ನು ಎಲ್ಲಿಯಾದರೂ ನೋಡಿದ್ದೀರಾ. ಇವರು ಕೊನೆಯ ಬಾರಿಗೆ ಇಂದೋರ್‍ನಲ್ಲಿ ಜಿಲೇಬಿ ತಿನ್ನುವಾಗ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಇವರು ಕಾಣೆಯಾಗಿದ್ದಾರೆ. ಇಡೀ ದೆಹಲಿಯಲ್ಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ” ಎಂದು ಬರೆಯಲಾಗಿತ್ತು.

Comments

Leave a Reply

Your email address will not be published. Required fields are marked *