ಸಂಪುಟ ರಚನೆಯಾದ ಒಂದು ವಾರದಲ್ಲೇ ಸಮ್ಮಿಶ್ರ ಸರ್ಕಾರ ಪತನ : ಕೈ ಮಾಜಿ ಶಾಸಕ ರಾಜಣ್ಣ ಭವಿಷ್ಯ

ತುಮಕೂರು: ಸಂಪುಟ ರಚನೆಯಾದ ಒಂದು ವಾರದಲ್ಲೇ ಸಮ್ಮಿಶ್ರ ಸರ್ಕಾರ ಕುಸಿದು ಬೀಳಲಿದೆ ಎಂದು ಕಾಂಗ್ರೆಸ್‍ನ ಮಾಜಿ ಶಾಸಕ ಕೆಎನ್ ರಾಜಣ್ಣ ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯ ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆಎನ್ ರಾಜಣ್ಣ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಕುರಿತು ನಡೆದಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಸಮ್ಮಿಶ್ರ ಸರ್ಕಾರದ ಕುರಿತು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸರ್ಕಾರಕ್ಕೆ ಅಲ್ಪಾಯುಷ್ಯ ಇದೆ. ರೈತರ ಸಾಲ ಮನ್ನಾ ಮಾಡುವವರೆಗಾದರೂ ಸರ್ಕಾರ ಇರಲಿ ಅನ್ನುವ ಆಶಯ ನಮ್ಮದು ಎಂದು ಹೇಳಿದ್ದಾರೆ.

ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ನನಗೆ ಮುಖ್ಯಮಂತ್ರಿ ಪದವಿ ಬೇಕಾಗಿಲ್ಲ, ಬೇಕಾದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇವೆಲ್ಲಾ ಬೆಳವಣಿಗೆ ನೋಡಿದರೆ ಯಾವ ಘಳಿಗೆಯಲ್ಲಾದರೂ ಚುನಾವಣೆ ಬರಬಹುದು ಎಂದು ರಾಜಣ್ಣ ಭವಿಷ್ಯ ನುಡಿದರು.

ನಾನು ಸಿಎಂ ಆದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಎಚ್‍ಡಿಕೆ ಹೇಳಿದ್ದರು. ಆದರೆ ಒಂದು ವಾರ ಆದ್ರೂ ಸಾಲ ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡುವುದರಲ್ಲಿ ನುಡಿದಂತೆ ನಡೆಯದ ಕುಮಾರಸ್ವಾಮಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.

35 ಕೆ.ಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದರು. ಅದು ಸಹ ಕೊಡುವ ಲಕ್ಷಣ ಕಾಣಿಸುತ್ತಿಲ್ಲ. ಪ್ರಣಾಳಿಕೆಯಲ್ಲಿನ ಭರವಸೆಯನ್ನು ಈಡೇರಿಸಲು ಹಿಂದೇಟು ಹಾಕುತ್ತಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಮಹಿಳೆಯರನ್ನು ಸೇರಿಸಿ ಬೃಹತ್ ಹೋರಾಟ ನಡೆಸಿ ನಾಡಿನ ಜನತೆಯ ಕ್ಷಮಾಪಣೆ ಕೇಳುವಂತೆ ಒತ್ತಾಯ ಮಾಡಲಾಗುವುದು ಎಂದು ರಾಜಣ್ಣ ಹೇಳಿದರು.

Comments

Leave a Reply

Your email address will not be published. Required fields are marked *