ಜನಪ್ರತಿನಿಧಿಗಳು ಗಂಡಸರಾಗಿದ್ರೆ ತಮಿಳ್ನಾಡಿಗೆ ಹರಿಯುತ್ತಿರೋ ನೀರು ನಿಲ್ಲಿಸಲಿ- ಮಂಡ್ಯ ರೈತರ ಎಚ್ಚರಿಕೆ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದಂತೆ ಕೆಆರ್‍ಎಸ್‍ಗೆ ಹರಿದು ಬರುತ್ತಿರುವ ನೀರನ್ನು ಸಂಗ್ರಹಿಸದೇ ತಮಿಳುನಾಡಿಗೆ ಹರಿಯಬಿಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಮಂಡ್ಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಆರ್‍ಎಸ್‍ಗೆ 27 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದುಬರುತ್ತಿದೆ. ಇದರ ನಡುವೆಯೇ ಸರ್ಕಾರ ಇಂದಿನಿಂದ ರೈತರ ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಿದೆ. ಜೊತೆಗೆ ರೈತರಿಗೆ ಅಣೆಕಟ್ಟಿನಲ್ಲಿ ನೀರಿಲ್ಲ. ಯಾವುದೇ ಬೆಳೆ ಬೆಳೆಯಬೇಡಿ ಎಂದು ಸೂಚನೆ ನೀಡಿದೆ. ಆದ್ರೆ ನಾಲೆಗಳಿಗೆ ನೀರು ನಿಲ್ಲಿಸಿರುವ ಸರ್ಕಾರ ತಮಿಳುನಾಡಿಗೆ ಮಾತ್ರ ಸುಮಾರು 10 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹರಿಯಬಿಡುತ್ತಿದೆ.

ರಾಜ್ಯ ಸರ್ಕಾರ ತಮಿಳುನಾಡಿನ ಸವಡಿಯಂತೆ ಕೆಲಸ ಮಾಡುತ್ತಿದೆ. ನೀರನ್ನು ಬಿಡಲು ಕೋರ್ಟ್ ಆದೇಶ ಅಂತಾರೆ. ಆದ್ರೆ ಇವರು ಅಧಿಕಾರ ಉಳಿಸಿಕೊಳ್ಳಬೇಕಾದಾಗ ಮಾತ್ರ ಯಾವ ಕೋರ್ಟ್ ಆದೇಶವಾದ್ರು ಉಲ್ಲಂಘನೆ ಮಾಡ್ತಾರೆ. ಕಳೆದ ಎಂಟು ತಿಂಗಳಿಂದ ಅಂದ್ರೆ 2017 ನೇ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಅಣೆಕಟ್ಟಿನಲ್ಲಿ 95 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಇರುವ ನೀರನ್ನು ತಮಿಳುನಾಡಿಗೆ ಬಿಟ್ಟು ರೈತರಿಗೆ ವಿಷ ಕೊಡುತ್ತಿರುವ ಜನಪ್ರತಿನಿಧಿಗಳು ಗಂಡಸರಾಗಿದ್ರೆ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ರೈತರ ಹಿತ ಕಾಪಾಡಲಿ. ಇಲ್ಲದಿದ್ರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡೋದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *