ಕುಡಿದು ಸಿಕ್ಕಿಬಿದ್ರೆ ಕೊಡಿಸ್ಬೇಕು ಊರಿಗೆಲ್ಲಾ ಮಟನ್ ಪಾರ್ಟಿ

– ಇಲ್ಲಿ ಕುಡುಕರಿಗೆ ಬೀಳುತ್ತೆ 2ರಿಂದ 5 ಸಾವಿರ ದಂಡ

ಅಹಮದಾಬಾದ್: ಗುಜರಾತಿನ ಹಳ್ಳಿಯೊಂದರಲ್ಲಿ ಕುಡುಕರ ಕಾಟ ನಿಯಂತ್ರಿಸಲು ಗ್ರಾಮಸ್ಥರೇ ಹೊಸ ನಿಯಮ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಯಾರಾದರೂ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದರೆ ಇಡೀ ಊರಿಗೆ ಮಟನ್ ಪಾರ್ಟಿ ಕೊಡಿಸಬೇಕು.

ಬನಸ್ಕಂತ ಜಿಲ್ಲೆಯ ಅಮೀರ್‍ಗಢ ತಾಲೂಕಿನ ಬುಡಕಟ್ಟು ಗ್ರಾಮ ಖತಿಸಿತರಾದಲ್ಲಿ ಹೀಗೊಂದು ವಿಚಿತ್ರ ನಿಯಮವಿದೆ. 2013-14ರಿಂದ ಈ ನಿಯಮವನ್ನು ಗ್ರಾಮದಲ್ಲಿ ಪಾಲಿಸಿಕೊಂಡ ಬರಲಾಗುತ್ತಿದೆ. ಈ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿತ್ತು. ಕಂಠಪೂರ್ತಿ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳಿಗೆ ಹೊಡೆದು ಹಿಂಸೆ ಕೊಡುವುದು ಈ ಗ್ರಾಮದ ಅನೇಕ ಪುರುಷರ ಚಾಳಿಯಾಗಿಬಿಟ್ಟಿತ್ತು. ಹೀಗಾಗಿ ಪ್ರತಿದಿನ ಗ್ರಾಮದಲ್ಲಿ ಜಗಳ, ಗಲಾಟೆ ನೋಡಿ ಬೇಸತ್ತಿದ್ದ ಊರ ಹಿರಿಯರು ಇದಕ್ಕೆ ಮುಕ್ತಿ ಕೊಡಲು ನಿರ್ಧರಿಸಿ ಹೊಸ ಉಪಾಯ ಮಾಡಿ ಯಶಸ್ಸು ಕಂಡಿದ್ದಾರೆ. ಸದ್ಯ ಈ ಗ್ರಾಮ ಕುಡುಕರಿಂದ ಮುಕ್ತವಾಗಿದೆ. ಇದನ್ನೂ ಓದಿ:ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

ಕುಡಿದ ಮತ್ತಿನಲ್ಲಿ ಇತರರಿಗೆ ಹಿಂಸೆ ಕೊಡುವುದು, ಹತ್ಯೆ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚಾಗುತಿತ್ತು. ಈ ಬಗ್ಗೆ ಅರಿತ ಖತಿಸಿತರಾದ ಹಿರಿಯರು 2013-14ರಲ್ಲಿ ಕುಡಿತ ಮುಕ್ತ ಗ್ರಾಮವನ್ನು ಮಾಡಲು ಪಣತೊಟ್ಟರು. ಗ್ರಾಮದಲ್ಲಿ ಯಾರಾದರೂ ಕುಡಿದು ಸಿಕ್ಕಿಬಿದ್ದರೆ ಅವರಿಗೆ 2 ಸಾವಿರ ರೂ. ದಂಡ, ಹಾಗೆಯೇ ಕುಡಿದು ಗಲಾಟೆ ಮಾಡಿದರೆ 5 ಸಾವಿರ ರೂ. ದಂಡ ಹಾಗೂ ಇವುಗಳ ಜೊತೆ ಮದ್ಯವ್ಯಸನಿಗಳು ಇಡೀ ಊರಿನ ಜನರಿಗೆಲ್ಲಾ ಬಾತಿಯೊಂದಿಗೆ(ಸ್ಥಳೀಯ ಆಹಾರ) ‘ಬೊಕ್ಡು’ ಅಥವಾ ಮಟನ್ ಊಟ ಹಾಕಿಸಬೇಕು ಎಂದು ನಿಯಮ ರೂಪಿಸಿದರು. ಗ್ರಾಮದಲ್ಲಿ ಏನಿಲ್ಲವೆಂದರೂ 750-800 ಮಂದಿ ವಾಸವಿದ್ದಾರೆ. ಹೀಗಾಗಿ ಇವರೆಲ್ಲರಿಗೂ ಬಾಡೂಟ ಹಾಕಿಸಲು ಸುಮಾರು 20 ಸಾವಿರ ರೂ. ಖರ್ಚಾಗುತ್ತದೆ ಎಂದು ಗ್ರಾಮದ ಸರಪಂಚ್ ಖಿಮ್ಜಿ ಡುಂಗೈಸಾ ತಿಳಿಸಿದ್ದಾರೆ.

ಹಿರಿಯರ ಆದೇಶವನ್ನು ಈಗಲೂ ಗ್ರಾಮದಲ್ಲಿ ಪಾಲಿಸಲಾಗುತ್ತಿದೆ. ಈ ದಂಡದ ನಿಯಮ ಜಾರಿಗೆ ಬಂದ ಮೇಲೆ 3ರಿಂದ 4 ಮಂದಿ ಮಾತ್ರ ಕುಡಿದು ಸಿಕ್ಕಿ ಬಿದ್ದು, 20ರಿಂದ 30 ಸಾವಿರ ರೂ. ಖರ್ಚು ಮಾಡಿ ಊರವರಿಗೆ ಮಾಂಸದೂಟ ಹಾಕಿಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದ ಇತರೆ ಕುಡುಕರು ಮದ್ಯ ಸೇವಿಸುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಹೀಗಾಗಿ ಇಲ್ಲಿ ಈಗ ಕುಡುಕರೇ ಇಲ್ಲ.

2018ರಲ್ಲಿ ಓರ್ವ ವ್ಯಕ್ತಿ ಮಾತ್ರ ಗ್ರಾಮದಲ್ಲಿ ಕುಡಿದು ಸಿಕ್ಕಿಬಿದ್ದಿದ್ದನು, ಆತ ಕೂಡ ಬೇರೆ ಊರಿನವನಾಗಿದ್ದನು. 2019ರಲ್ಲಿ ಇಲ್ಲಿಯವರೆಗೆ ಯಾರೂ ಕೂಡ ಕುಡಿದು ಸಿಕ್ಕಿ ಹಾಕಿಕೊಂಡಿಲ್ಲ ಎಂದು ಗ್ರಾಮಸ್ಥರು ಖುಷಿಯಿಂದ ಹೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *