ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

– S400 ಕ್ಷಿಪಣಿ ವ್ಯವಸ್ಥೆ ಮುಂದೆ ನಿಂತು ಪ್ರಧಾನಿ ಭಾಷಣ

ಛತ್ತೀಸಗಢ: ಭಯೋತ್ಪಾದನೆ ವಿರುದ್ಧ ಭಾರತದ ಲಕ್ಷ್ಮಣ ರೇಖೆ ಸ್ಪಷ್ಟ, ಪಾಕಿಸ್ತಾನದಿಂದ ಮತ್ತೆ ದಾಳಿ ನಡೆದರೆ ಭಾರತ ನುಗ್ಗಿ ಹೊಡೆಯುತ್ತದೆ ಎಂದು ಪ್ರಧಾನಿ ಮೋದಿ (PM Modi) ಮತ್ತೆ ನೇರಾನೇರ ಎಚ್ಚರಿಕೆ ನೀಡಿದ್ದಾರೆ.

ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಇಂದು ಮೋದಿ ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ (Adampur Airbase)  ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದರು.ಇದನ್ನೂ ಓದಿ: Photo Gallery: ‘ಆಪರೇಷನ್‌ ಸಿಂಧೂರ’ ವೀರರನ್ನು ಭೇಟಿಯಾದ ಪಿಎಂ ಮೋದಿ

ಭಯೋತ್ಪಾದನೆಯ ವಿರುದ್ಧ ಭಾರತದ ಲಕ್ಷ್ಮಣ ರೇಖೆ ಈಗ ಸ್ಪಷ್ಟವಾಗಿದೆ. ಒಂದು ವೇಳೆ ಪಾಕಿಸ್ತಾನ ಮತ್ತೊಂದು ದಾಳಿ ನಡೆಸಿದರೆ, ಭಾರತವು ತಕ್ಕ ಉತ್ತರ ನೀಡುತ್ತದೆ. `ಆಪರೇಷನ್ ಸಿಂಧೂರ’ದಿಂದ (Operation Sindoor) ನೀವೆಲ್ಲ ಇತಿಹಾಸವನ್ನು ಸೃಷ್ಟಿಸಿದ್ದೀರಿ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಈ ಯಶಸ್ಸಿನಿಂದಾಗಿ ಹೆಮ್ಮೆಪಡುತ್ತಾರೆ. ನೀವು ಯಾವುದೇ ಗುರಿಯನ್ನು ತಲುಪಿದಾಗಲೂ ಕೇಳಿಬರುವುದು ಒಂದೇ ಅದು `ಭಾರತ್ ಮಾತಾ ಕಿ ಜೈ’, ಇದು ಕೇವಲ ಘೋಷ ವಾಕ್ಯವಲ್ಲ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸೈನಿಕರ ಧ್ವನಿ, ಭಾರತದ ನೆಲದ ಮೇಲೆ, ಕಾರ್ಯಾಚರಣೆಯ ವೇಳೆ ಇದು ಯಾವಾಗಲೂ ಪ್ರತಿಧ್ವನಿಸುತ್ತಿರುತ್ತದೆ. ಇಂದು ನಾನು ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ನಿಮ್ಮಂತಹ ಧೈರ್ಯಶಾಲಿಗಳನ್ನು ಕಣ್ತುಂಬಿಕೊಳ್ಳುವುದೇ ನಮ್ಮೆಲ್ಲರಿಗೆ ಆಶೀರ್ವಾದ ಎಂದು ಹೇಳಿದರು.

ಆಪರೇಷನ್ ಸಿಂಧೂರ್ ಇದೊಂದು ಸಾಮಾನ್ಯ ಕಾರ್ಯಾಚರಣೆಯಲ್ಲ. ಇದು ಇಡೀ ದೇಶದ ನಿರ್ಣಯ ಹಾಗೂ ದೃಢ ನಿರ್ಧಾರದ ಬಗ್ಗೆ ತೋರಿಸುತ್ತದೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ, ಒಂದು ವೇಳೆ ಇನ್ನೊಂದು ದಾಳಿ ನಡೆದರೆ ಭಾರತ ಖಂಡಿತವಾಗಿ ಸೇಡು ತೀರಿಸಿಕೊಳ್ಳುತ್ತದೆ. ಭಾರತೀಯ ಸೇನೆ ಕೇವಲ ಉಗ್ರರು ನೆಲೆಗಳನ್ನು ನಾಶ ಮಾಡಿಲ್ಲ, ಅವರ ದುಷ್ಟ ಉದ್ದೇಶಗಳನ್ನು ಹೊಡೆದು ಹಾಕಿದ್ದಾರೆ ಎಂದರು.

ನಮ್ಮ ಉದ್ದೇಶ ಭಯೋತ್ಪಾದಕ ನೆಲೆಗಳು ಹಾಗೂ ಪಾಕಿಸ್ತಾನದೊಳಗಿನ ಭಯೋತ್ಪಾದಕರ ಮೇಲೆ ದಾಳಿ ಮಾಡುವುದು. ಆದರೆ ಪಾಕಿಸ್ತಾನ ನಾಗರಿಕ ವಿಮಾನಗಳನ್ನು ಗುರಾಣಿಯಾಗಿ ಬಳಸಿಕೊಂಡು ಹೇಯಕೃತ್ಯ ನಡೆಸಿತ್ತು. ಆದರೆ ನಾಗರಿಕ ವಿಮಾನಗಳಿಗೆ ಹಾನಿ ಮಾಡದೇ ನೀವು ನಿಮ್ಮ ಗುರಿಯನ್ನು ಸಾಧಿಸಿದ್ದೀರಿ ಎಂದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಅದಮ್‌ಪುರ ವಾಯುನೆಲೆಯನ್ನು ನಾವು ಧ್ವಂಸ ಮಾಡಿದ್ದೇವೆ. ಎಸ್ 400 ಕ್ಷಿಪಣಿ ವ್ಯವಸ್ಥೆಗೆ ಹಾನಿ ಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿತ್ತು. ಆದರೆ ಇಂದು ಮೋದಿ ಅದಮ್‌ಪುರ ವಾಯುನೆಲೆಗೆ ಭೇಟಿ ನೀಡುವುದರ ಜೊತೆ ಹಿಂದುಗಡೆ ಎಸ್ 400 ಕ್ಷಿಪಣಿ ವ್ಯವಸ್ಥೆ ಮುಂದೆ ನಿಂತು ಭಾಷಣ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಹ್ಯಾಂಗರ್ಸ್‌ ನಾಶ, ರನ್‌ವೇಗಳಿಗೆ ಹಾನಿ – ಪಾಕ್‌ ದುಸ್ಥಿತಿ ಉಪಗ್ರಹ ಚಿತ್ರಗಳಲ್ಲಿ ಬಹಿರಂಗ