ಟೀಂ ಇಂಡಿಯಾ ಗೆಲುವಿಗೆ ಪಾಕಿಸ್ತಾನಿಗಳ ಪ್ರಾರ್ಥನೆ!

– ಅಫ್ಘಾನ್ ವಿರುದ್ಧ ತಿಣುಕಾಡಿ ಗೆದ್ದ ಪಾಕ್

ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಭಾರತ ಭಾನುವಾರ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ರಾಜಕೀಯ ಟೀಕೆಗೆ ಗುರಿಯಾಗಿರುವ ಕೇಸರಿ ಟೀ-ಶರ್ಟ್ ಧರಿಸಿ ಕೊಹ್ಲಿ ಪಡೆ ಮೈದಾನಕ್ಕೆ ಇಳಿಯಲಿದೆ.

ನಂಬರ್ 4ನೇ ಕ್ರಮಾಂಕದಲ್ಲಿ ಆಲ್‍ರೌಂಡರ್ ವಿಜಯ್ ಶಂಕರ್ ವಿಫಲವಾಗುತ್ತಿರುವ ಕಾರಣ, ರಿಷಬ್ ಪಂಥ್‍ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತವರಿನಲ್ಲಿ ಇಂಗ್ಲೆಂಡ್ ಆಟ ಎಲ್ಲರ ಅಚ್ಚರಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಶನಿವಾರದ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಿಣುಕಾಡಿ ಗೆಲುವು ಸಾಧಿಸಿದೆ. ಅಫ್ಘಾನಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ಸಿಡಿಸಿತ್ತು. ಈ ಗುರಿಯನ್ನು ತಲುಪಲು ಪಾಕಿಸ್ತಾನ ಪರದಾಡಿತು.

ಈ ಮೂಲಕ ಪಾಕ್ ಸೆಮಿಫೈನಲ್ ಪ್ರವೇಶ ಮಾಡುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಆದರೆ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಮಾತ್ರ ಪಾಕ್ ಕನಸು ಈಡೇರಲಿದೆ.

ವಿಚಿತ್ರವೆಂದರೆ ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಲಿ ಎಂದು ಬದ್ಧವೈರಿಯಾಗಿರುವ ಪಾಕಿಸ್ತಾನ ಪ್ರಾರ್ಥಿಸುತ್ತಿದೆ. ಭಾನುವಾರ ಇಂಗ್ಲೆಂಡ್ ಸೋತರೆ ಸೆಮಿಫೈನಲ್ ತಲುಪುವ ಪಾಕ್ ದಾರಿ ಸ್ವಲ್ಪ ಸರಳವಾಗಲಿದೆ ಎನ್ನುವುದು ಪಾಕಿಗಳ ಲೆಕ್ಕಾಚಾರ. ಜೊತೆಗೆ, ಇನ್ನುಳಿದಿರುವ ಶ್ರೀಲಂಕಾವನ್ನೂ ಮಣಿಸಲಿ ಅಂತಲೂ ಪ್ರಾರ್ಥಿಸುತ್ತಿದ್ದಾರೆ.

ಪಾಕಿಸ್ತಾನ ಸೆಮಿಫೈನಲ್ಸ್ ನಿಂದ ಹೊರಗಟ್ಟಲು, ಉದ್ದೇಶಪೂರ್ವಕವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸೋಲಬಹುದು. ಟೀಂ ಇಂಡಿಯಾ ಯಾರಿಗೂ ಅರ್ಥವಾಗದ ರೀತಿ ಆಡುತ್ತಿದೆ. ಅಫ್ಘಾನಿಸ್ಥಾನದ ವಿರುದ್ಧವೂ ಉದ್ದೇಶಪೂರ್ವಕವಾಗಿ ಕಳಪೆಯಾಗಿ ಆಡಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿಲ್ ಅಲಿ ಹೇಳಿಕೆ ನೀಡಿದ್ದಾರೆ. ಬಸಿಲ್ ಅಲಿ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *