Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

ಕೊಲಂಬೋ: ಏಷ್ಯಾ ಕಪ್‌ (Asia Cup) ಕಪ್‌ ವಿವಾದ ಜೀವಂತವಾಗಿರುವ ಬೆನ್ನಲ್ಲೇ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಇಂದು ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ( ICC Women’s World Cup) ಪಂದ್ಯದಲ್ಲಿ ದೊಡ್ಡ ಎಡವಟ್ಟಾಗಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಹಾಕಲು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಫಾತಿಮಾ ಸನಾ ಆಗಮಿಸಿದರು. ಈ ವೇಳೆ ಇಬ್ಬರು ನಾಯಕಿಯರು ಹ್ಯಾಂಡ್‌ಶೇಕ್‌ ಮಾಡಲಿಲ್ಲ. ನಂತರ ಹರ್ಮನ್‌ಪ್ರೀತ್‌ ಕೌರ್‌  ಟಾಸ್‌ ಹಾಕಿದಾಗ ಫಾತಿಮಾ ಸನಾ ʼಟೇಲ್‌ʼ ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

ನಾಣ್ಯ ನೆಲಕ್ಕೆ ಬಿದ್ದ ಕೂಡಲೇ ಆಸ್ಟ್ರೇಲಿಯಾದ ನಿರೂಪಕ ಮೆಲ್ ಜೋನ್ಸ್ ʼಹೆಡ್ʼ ಎಂದು ಹೇಳಿದರು. ಆದರೆ ಐಸಿಸಿ ಮ್ಯಾಚ್ ರೆಫರಿ ಶಾಂಡ್ರೆ ಫ್ರಿಟ್ಜ್ ಪಾಕ್‌ ನಾಯಕಿಯನ್ನು ಕರೆದರು. ಫಾತಿಮಾ ಸನಾ ಕೂಡಲೇ ನಾವು ಬೌಲಿಂಗ್‌ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರಿಂದ ಭಾರತದ ಆಟಗಾರ್ತಿಯರು ಬ್ಯಾಟಿಂಗ್‌ಗೆ ಇಳಿದರು. ಇದನ್ನೂ ಓದಿ:  ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

ಹರ್ಮನ್‌ಪ್ರೀತ್‌ ಕೌರ್‌ ಸಹ ರೆಫ್ರಿ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಕೌರ್‌ ಅವರಿಗೆ ಟಾಸ್‌ನಲ್ಲಿ ಎಡವಟ್ಟಾಗಿದ್ದು ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ರೆಫ್ರಿ ನಿರ್ಧಾರವನ್ನು ವಿರೋಧಿಸಲಿಲ್ವಾ ಎಂಬ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಉತ್ತರ ಸಿಗಲಿದೆ.

ರೆಫ್ರಿ ಶಾಂಡ್ರೆ ಫ್ರಿಟ್ಜ್ ಯಾಕೆ ತಪ್ಪು ನಿರ್ಧಾರ ಕೈಗೊಂಡರು? ಟೇಲ್‌ ಎಂದು ಹೇಳಿದರೂ ಫಾತಿಮಾ ಸನಾ ಹೋಗಿದ್ದು ಯಾಕೆ ಎಂದು ನೆಟ್ಟಿಗರು ಈಗ ಪ್ರಶ್ನೆ ಮಾಡುತ್ತಿದ್ದಾರೆ.

ಒಂದು ವೇಳೆ ಪಾಕಿಸ್ತಾನ ಟಾಸ್‌ ಗೆದ್ದು ರೆಫ್ರಿ ಹರ್ಮನ್‌ ಪ್ರೀತ್‌ ಕೌರ್‌ ಅವರನ್ನು ಕರೆದಿದ್ದರೆ ಇಷ್ಟು ಹೊತ್ತಿಗೆ ಐಸಿಸಿಯನ್ನು ಬಿಸಿಸಿಐ ಖರೀದಿಸಿದೆ ಎಂಬ ಟ್ರೆಂಡ್‌ ಆರಂಭವಾಗುತ್ತಿತ್ತು. ಜಯ್‌ ಶಾ ಅಧ್ಯಕ್ಷರಾಗಿರುವ ಕಾರಣ ಐಸಿಸಿ ಹೇಗೆ ಬೇಕಾದರೂ ಪಂದ್ಯವನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂಬ ಕಮೆಂಟ್‌ ಪಾಕ್‌ ಪರವಾಗಿ ಬರುತ್ತಿದ್ದವು ಎಂದು ಕ್ರಿಕೆಟ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.