T20 WorldCup 2024 – ಟೀಂ ಇಂಡಿಯಾ ಆಟಗಾರರ ದಾಖಲೆಗಳ ಸುರಿಮಳೆ! ‌

ಬ್ರಿಡ್ಜ್‌ಟೌನ್: 17 ವರ್ಷಗಳ ಬಳಿಕ ಟೀಂ ಇಂಡಿಯಾ ಮತ್ತೆ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಈ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಆಟಗಾರರಿಂದ ಹಲವು ದಾಖಲೆಗಳು ನಿರ್ಮಾಣವಾಯಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನೂತನ ದಾಖಲೆ ನಿರ್ಮಿಸಿದರೆ, ಬೌಲರ್‍ಗಳೂ ವಿಶ್ವದಾಖಲೆ ಬರೆಯುವುದರಲ್ಲಿ ನಿಸ್ಸೀಮರಾದರು. ಈ ದಾಖಲೆಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಹಿಟ್‍ಮ್ಯಾನ್ 600 ಸಿಕ್ಸರ್ ದಾಖಲೆ:
ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌ 600 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು  ನಿರ್ಮಿಸಿದರು. ಅವರು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು. ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ 553, ಪಾಕಿಸ್ತಾನದ ಶಾಹಿದ್ ಅಫ್ರಿದಿ 476 ಸಿಕ್ಸರ್‌ಗಳೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.

4,000 ಪೂರೈಸಿದ ಹಿಟ್‍ಮ್ಯಾನ್:
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 52 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20ಯಲ್ಲಿ 4,231 ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 3ನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ 125 ಪಂದ್ಯಗಳಲ್ಲಿ 4,188 ರನ್ ಗಳಿಸಿ 2ನೇ ಸ್ಥಾನ ಹಾಗೂ ಬಾಬರ್ ಅಜಂ 123 ಪಂದ್ಯಗಳಲ್ಲಿ 4145 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.‌

ಅರ್ಷ್‍ದೀಪ್ 4 ವಿಕೆಟ್ – ನೂತನ ದಾಖಲೆ
ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿ ಯುಎಸ್ ವಿರುದ್ಧ ಆರ್ಶ್‍ದೀಪ್ ಸಿಂಗ್ ಹೊಸ ದಾಖಲೆ ಬರೆದರು. ಇದು ಟಿ20 ವಿಶ್ವಕಪ್‍ನಲ್ಲಿ ಭಾರತೀಯ ಬೌಲರ್‍ನ ಶ್ರೇಷ್ಠ ಪ್ರದರ್ಶನವಾಗಿದೆ. ಈ ಮೊದಲು 2014ರಲ್ಲಿ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ 11 ರನ್‍ಗೆ 4 ವಿಕೆಟ್, 2012ರಲ್ಲಿ ಇಂಗ್ಲೆಂಡ್ ವಿರುದ್ಧ ಹರ್ಭಜನ್ ಸಿಂಗ್ 12 ರನ್‍ಗೆ 4 ವಿಕೆಟ್, 2007ರಲ್ಲಿ ದ.ಆಫ್ರಿಕಾ ವಿರುದ್ಧ ಆರ್.ಪಿ.ಸಿಂಗ್ 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.

ನಿವೃತ್ತಿಗೂ ಮುನ್ನ ಕಿಂಗ್ ಕೊಹ್ಲಿ ದಾಖಲೆ:
ಟಿ20 ಹಾಗೂ ಏಕದಿನ ವಿಶ್ವಕಪ್‍ನಲ್ಲಿ ಒಟ್ಟಾಗಿ 3,000 ರನ್ ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಸೂಪರ್ -8 ಪಂದ್ಯದಲ್ಲಿ 37 ರನ್ ಬಾರಿಸಿ ಅವರು ಈ ಮೈಲುಗಲ್ಲು ಸಾಧಿಸಿದರು.

ಪಾಕ್ ವಿರುದ್ಧ 7ನೇ ಜಯ
420 ವಿಶ್ವಕಪ್‍ನಲ್ಲಿ ಪಾಕ್ ವಿರುದ್ಧ ಭಾರತ 7ನೇ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ ತಂಡವೊಂದರ ವಿರುದ್ಧ ಸಿಕ್ಕ ಅತಿ ಹೆಚ್ಚು ಗೆಲುವಿನ ದಾಖಲೆ ಇದಾಗಿದೆ. 2021ರ ವಿಶ್ವಕಪ್‍ನಲ್ಲಿ ಒಂದು ಪಂದ್ಯ ಸೋತಿದ್ದು ಬಿಟ್ಟರೆ ಭಾರತ 2007ರ ವಿಶ್ವಕಪ್ ಫೈನಲ್ ಸೇರಿ ಪಾಕಿಸ್ತಾನ ವಿರುದ್ಧ ಇನ್ನುಳಿದ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.