ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

– ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಪಾಂಡ್ಯ

ನ್ಯೂಯಾರ್ಕ್‌: ಟಿ20 ವಿಶ್ವಕಪ್‌ (T20 World Cup) ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ಭಾರತ ಭರ್ಜರಿ 60 ರನ್‌ಗಳಿಂದ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಭಾರತ (Team India) 5 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ 9 ವಿಕೆಟ್‌ ನಷ್ಟಕ್ಕೆ 120 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಬಾಂಗ್ಲಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿತು. ಮಧ್ಯಮ ಕ್ರಮಾಂಕದಲ್ಲಿ ಶಕೀಬ್‌ ಉಲ್‌ ಹಸನ್‌ 28 ರನ್‌ (34 ಎಸೆತ, 2 ಬೌಂಡರಿ), ಮಹಮದುಲ್ಲಾ 40 ರನ್‌ (28 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದ ಪರಿಣಾಮ ತಂಡದ ಮೊತ್ತ 100 ರ ಗಡಿ ದಾಟಿತ್ತು.

ಅರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ ತಲಾ 2 ವಿಕೆಟ್‌, ಬುಮ್ರಾ, ಸಿರಾಜ್‌, ಪಾಂಡ್ಯ, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ರಿಷಭ್‌ ಪಂತ್‌ ಅಮೋಘ ಅರ್ಧಶತಕ ಹಾಗೂ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್‌ ಗಳಿಸಿತ್ತು.

ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 1.5 ಓವರ್‌ಗಳಲ್ಲೇ 11 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌ ಹಾಗೂ ಉಪನಾಯಕ ಹಾರ್ದಿಕ್‌ ಪಾಂಡ್ಯ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು.

ಟೀಂ ಇಂಡಿಯಾ ಪರ ನಾಯಕ ರೋಹಿತ್‌ ಶರ್ಮಾ 19 ಎಸೆತಗಳಲ್ಲಿ 23 ರನ್‌, ರಿಷಭ್‌ ಪಂತ್‌ (Rishabh Pant) 53 ರನ್‌ (32 ಎಸೆತ, 4 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಸೂರ್ಯಕುಮಾರ್‌ ಯಾದವ್‌ 31 ರನ್‌ (18 ಎಸೆತ, 4 ಬೌಂಡರಿ), ಹಾರ್ದಿಕ್‌ ಪಾಂಡ್ಯ (Hardik Pandya) 40 ರನ್‌ (23 ಎಸೆತ, 4 ಸಿಕ್ಸರ್‌, 2 ಬೌಂಡರಿ), ಶಿವಂ ದುಬೆ 14 ರನ್‌, ರವೀಂದ್ರ ಜಡೇಜಾ 4 ರನ್‌ ಹಾಗೂ ಸಂಜು ಸ್ಯಾಮ್ಸನ್‌ 1 ರನ್‌ ಗಳಿಸಿದರು.

ಬಾಂಗ್ಲಾ ಪರ ತನ್ವೀರ್ ಇಸ್ಲಾಂ, ಮಹಮ್ಮದುಲ್ಲಾ, ಶೋರಿಫುಲ್ ಇಸ್ಲಾಂ, ಮಹೇದಿ ಹಸನ್ ತಲಾ ಒಂದೊಂದು ವಿಕೆಟ್‌ ಕಿತ್ತರು.