ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

ದುಬೈ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದ ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಬೀಗಿದೆ.

ಗೆಲ್ಲಲು 173 ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡ 18.5  ಓವರ್‌ ಗಳಲ್ಲಿ  2 ವಿಕೆಟ್‌ ಕಳೆದುಕೊಂಡು 173 ರನ್ ಸಿಡಿಸಿ ಪಂದ್ಯ ಗೆದ್ದುಕೊಂಡಿತು. ಇದನ್ನೂ ಓದಿ: ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ ನಾಲ್ವರು ಕನ್ನಡಿಗರು

ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಕಳೆದ ಪಂದ್ಯದ ಪ್ರದರ್ಶನವನ್ನು ಮುಂದುವರೆಸಿ 53 ರನ್ (38 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮಿಚೆಲ್ ಮಾರ್ಷ್ 2ನೇ ವಿಕೆಟ್‍ಗೆ 92 ರನ್ (59 ಎಸೆತ) ಜೊತೆಯಾಟವಾಡಿದರು. ವಾರ್ನರ್ ಔಟ್ ಆದ ಬಳಿಕವು ತನ್ನ ಆರ್ಭಟ ಮುಂದುವರೆಸಿದ ಮಾರ್ಷ್  ಕಡೆಯವರೆಗೆ ಬ್ಯಾಟ್‍ಬೀಸಿ 77 ರನ್‌ (50 ಎಸೆತ, 6 ಬೌಂಡರಿ, 4 ಸಿಕ್ಸ್‌) ಸಿಡಿಸಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು.

ಈ ಪ್ರಶಸ್ತಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಟ್ರೋಫಿ ಜೊತೆ 1.6 ಮಿಲಿಯನ್ ಡಾಲರ್ ಎಂದರೆ ಸುಮಾರು 12 ಕೋಟಿ ರೂಪಾಯಿಯನ್ನು ನಗದು ಬಹುಮಾನವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡ 800 ಮಿಲಿಯನ್ ಡಾಲರ್(6 ಕೋಟಿ ರೂಪಾಯಿ) ನಗದು ಬಹುಮಾನ ಪಡೆಯಿತು. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

ವಿಲಿಯಮ್ಸನ್ ಹೋರಾಟ ವ್ಯರ್ಥ
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆಸ್ಟ್ರೇಲಿಯಾ ಲೆಕ್ಕಾಚಾರದಂತೆ ನ್ಯೂಜಿಲೆಂಡ್ ಆರಂಭಿಕ ಜೋಡಿಯನ್ನು 3.5 ಓವರ್ ಆಗುವಷ್ಟರಲ್ಲಿ ಪೆವಿಲಿಯನ್ ಕಳುಹಿಸಲಾಗಿತ್ತು. ನ್ಯೂಜಿಲೆಂಡ್‍ನ ಆರಂಭಿಕ ಆಟಗಾರ ಡೇರಿಲ್ ಮಿಚಲ್ 11 ರನ್ (8 ಎಸೆತ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಕೂಡ 28 ರನ್ (35 ಎಸೆತ, 3 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಒಂದಾದ ನಾಯಕ ಕೇನ್ ವಿಲಿಮ್ಸನ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿ 3ನೇ ವಿಕೆಟ್‍ಗೆ 68 ರನ್ (37 ಎಸೆತ)ಗಳ ಜೊತೆಯಾಟವಾಡಿ ತಂಡದ ಸ್ಕೋರ್ ಹಚ್ಚಿಸಿತು. ಗ್ಲೆನ್ ಫಿಲಿಪ್ಸ್ 18 ರನ್ (17 ಎಸೆತ, 1 ಬೌಂಡರಿ, 1 ಸಿಕ್ಸ್)ಗೆ ಸುಸ್ತಾದರು. ಆದರೆ ಒಂದು ಕಡೆ ಬೌಂಡರಿ, ಸಿಕ್ಸರ್‍ಗಳ ಅಬ್ಬರದೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿದ ವಿಲಿಯಮ್ಸನ್ 85 ರನ್ (48 ಎಸೆತ, 10 ಬೌಂಡರಿ, 3 ಸಿಕ್ಸ್) ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

ಅಂತಿಮವಾಗಿ ನ್ಯೂಜಿಲೆಂಡ್ ತಂಡ ನಿಗದಿತ ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿತು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‍ವುಡ್ 3 ವಿಕೆಟ್ ಕಿತ್ತು ಮಿಂಚಿದರೆ, ಇನ್ನುಳಿದ 1 ವಿಕೆಟ್ ಆಡಮ್ ಜಂಪಾ ಪಾಲಾಯಿತು.

Comments

Leave a Reply

Your email address will not be published. Required fields are marked *