World Cup Final: ಆಸೀಸ್‌ಗೆ 241 ರನ್‌ಗಳ ಗುರಿ – ವಿಶ್ವಕಪ್‌ಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡದ ಟೀಂ ಇಂಡಿಯಾ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 241 ರನ್‌ಗಳ ಗುರಿ ನೀಡಿದೆ.

ಆರಂಭದಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾದ ಭಾರತ ತಂಡ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 50 ಓವರ್‌ಗಳಲ್ಲಿ 240 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಆರಂಭದಲ್ಲೇ ಅಸೀಸ್‌ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ರೋಹಿತ್‌ ಶರ್ಮಾ 31 ಎಸೆತಗಳಲ್ಲೇ 47 ರನ್‌ (3 ಸಿಕ್ಸರ್‌, 4 ಬೌಂಡರಿ) ಬಾರಿಸಿ ಔಟಾದರು. ಆದ್ರೆ ಸೆಮಿಸ್‌ನಲ್ಲಿ ಕಿವೀಸ್‌ ವಿರುದ್ಧ ಅಬ್ಬರಿಸಿದ್ದ ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ 4 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿ ಕೈಕೊಟ್ಟರು. ಈ ಬೆನ್ನಲ್ಲೇ ಶ್ರೇಯಸ್‌ ಅಯ್ಯರ್‌ ಕೂಡ ಕೇವಲ ಒಂದೇ ಒಂದು ಬೌಂಡರಿ ಗಳಿಸಿ ಔಟಾದರು.

ಮೊದಲ 10.2 ಓವರ್‌ಗಳಲ್ಲೇ 81 ರನ್‌ಗಳಿಸಿದ್ದ ಭಾರತ ತಂಡ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಿತ್ತು. ಇದರಿಂದ 4ನೇ ವಿಕೆಟ್‌ಗೆ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್‌ ಜೋಡಿ ನಿಧಾನಗತಿಯ ಬ್ಯಾಟಿಂಗೆ ಮುಂದಾಯಿತು. ಈ ಜೋಡಿ 109 ಎಸೆತಗಳಲ್ಲಿ 67 ರನ್‌ಗಳ ಜವಾಬ್ದಾರಿಯುತ ಜೊತೆಯಾಟ ನೀಡಿದರೂ 97 ಎಸೆತಗಳಲ್ಲಿ ಕೇವಲ ಒಂದೇ ಒಂದು ಬೌಂಡರಿ ದಾಖಲಾಗಿತ್ತು.

ಉತ್ತಮ ರನ್‌ ಕಲೆಹಾಕುವ ಭರವಸೆ ಮೂಡಿಸಿದ್ದ ಈ ಜೋಡಿ ಆಟಕ್ಕೆ ಆಸ್ಟ್ರೇಲಿಯಾ ಕ್ಯಾಪ್ಟನ್‌ ಪ್ಯಾಟ್‌ ಕಮ್ಮಿನ್ಸ್‌ ಕೊಹ್ಲಿ ಆಟಕ್ಕೆ ಬ್ರೇಕ್‌ ಹಾಕಿದರು. 54 ರನ್‌ (63 ಎಸೆತ, 4 ಬೌಂಡರಿ) ಗಳಿಸಿ ಕೊಹ್ಲಿ ಔಟಾಗುತ್ತಿದ್ದಂತೆ, ಇಡೀ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತ್ತು. ಲಕ್ಷಾಂತರ ಅಭಿಮಾನಿಗಳು ತಲೆಯ ಮೇಲೆ ಕೈಹೊತ್ತು ಕುಳಿತರು. ಆ ನಂತರ 107 ಎಸೆತಗಳನ್ನು ಎದುರಿಸಿದ ಕೆ.ಎಲ್‌ ರಾಹುಲ್‌ ಕೇವಲ ಒಂದೇ ಒಂದು ಬೌಂಡರಿ ಸಿಡಿಸಿ 66 ರನ್‌ ಗಳಿಸಿದರು.ನಂತರ ಕಣಕ್ಕಿಳಿದ ಯಾವೊಬ್ಬ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್‌ ಉಳಿಯದ ಕಾರಣ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಟೀಂ ಇಂಡಿಯಾ ಪರ ಸೂರ್ಯಕುಮಾರ್‌ ಯಾದವ್‌ 15 ರನ್‌, ರವೀಂದ್ರ ಜಡೇಜಾ 9 ರನ್‌, ಮೊಹಮ್ಮದ್‌ ಶಮಿ 6 ರನ್‌, ಜಸ್ಪ್ರೀತ್‌ ಬುಮ್ರಾ 1 ರನ್‌, ಕುಲ್ದೀಪ್‌ ಯಾದವ್‌ 10 ರನ್‌ ಹಾಗೂ ಮೊಹಮ್ಮದ್‌ ಸಿರಾಜ್‌ 9 ರನ್‌ ಗಳಿಸಿ ಔಟಾದರು.

ಆಸೀಸ್‌ ಪರ ಮಾರಕ ದಾಳಿ ನಡೆಸಿದ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌, ಕಿತ್ತರೆ, ಜೋಶ್‌ ಹೇಜಲ್‌ವುಡ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.