ಇನ್ನು ಮುಂದೆ ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆ – ನಿರ್ಮಲಾ ಸೀತಾರಾಮನ್ ಪ್ರಕಟಣೆ

ನವದೆಹಲಿ: ಕೊನೆಗೂ ಕನ್ನಡಿಗರ ಅಂದೋಲನ ಯಶಸ್ವಿಯಾಗಿದ್ದು, ಇನ್ನು ಮುಂದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಯಲ್ಲಿ ಐಪಿಬಿಎಸ್  ನಡೆಸುವ ಆರ್‌ಆರ್‌ಬಿ ಪರೀಕ್ಷೆಯನ್ನು ಬರೆಯಬಹುದು.

ಕನ್ನಡ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಐಬಿಪಿಎಸ್ ನಡೆಸುವ ಆರ್‌ಆರ್‌ಬಿ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ನಡೆಸಬೇಕೆಂಬ ಆಗ್ರಹವನ್ನು ಸ್ವೀಕರಿಸಿದ ಕೇಂದ್ರ ಸರ್ಕಾರ ಈಗ ಈ ಭಾಷೆಯಲ್ಲಿ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದೆ.

ಲೋಕಸಭಾ ಅಧಿಶನದಲ್ಲಿ ಗುರುವಾರ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ 45 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿದ್ದು, 90 ಸಾವಿರ ಜನರು ಉದ್ಯೋಗಿಗಳಿದ್ದಾರೆ. ಇವುಗಳಿಗೆ ಆರ್‌ಆರ್‌ಬಿ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಐಬಿಪಿಎಸ್ ಮೂಲಕ ನೇಮಕಾತಿ ನಡೆಯುತ್ತಿದೆ. ಹೀಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಬ್ಯಾಂಕ್‍ನಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡುವ ನಿಟ್ಟಿನಲ್ಲಿ 13 ಸ್ಥಳಿಯ ಭಾಷೆಯಲ್ಲೂ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲಿ ಹೆಚ್ಚು ಜ್ಞಾನ ಪಡೆದುಕೊಂಡಿರುತ್ತಾರೆ. ಹೀಗಾಗಿ ಪ್ರಾದೇಶಿಕ ಭಾಷೆಯಲ್ಲಿಯೇ  ಆರ್‌ಆರ್‌ಬಿ, ಐಬಿಪಿಎಸ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಆರ್‌ಆರ್‌ಬಿಯ ನೇರ ನೇಮಕಾತಿ ಸ್ಕೇಲ್ 1 ಹಾಗೂ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಜೊತೆಗೆ ಐಬಿಪಿಎಸ್ ನ  ಆರ್‌ಆರ್‌ಬಿ ಪರೀಕ್ಷೆಗಳ್ನು ಇಂಗ್ಲಿಷ್ ಹಾಗೂ ಹಿಂದಿ ಹೊರತಾಗಿಯೂ ಕನ್ನಡ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲೆಯಾಳಂ, ಮಣಿಪುರಿ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಯಲ್ಲಿ ಬರೆಯಬಹುದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಜೋರಾಗುತ್ತಿದ್ದಂತೆ ಲೋಕಸಭೆಯ ಶೂನ್ಯ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ವಿಚಾರವನ್ನು ಪ್ರಸ್ತಾಪ ಮಾಡಿ ಕನ್ನಡ ಸೇರಿದಂತೆ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಪ್ರಸ್ತಾಪ ಮಾಡಿದ್ದರು.

ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆ ಆಗುತ್ತಿಲ್ಲ. ಐಬಿಪಿಎಸ್ ನಡೆಸಿದ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಮೂರು ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ಈ ಹಿಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದರು.

Comments

Leave a Reply

Your email address will not be published. Required fields are marked *