ಅಡ್ಡಕತ್ತರಿಯಲ್ಲಿ ಐಎಎಸ್ ಅಧಿಕಾರಿ: ಸಿಎಂ-ರೋಹಿಣಿ ಸಿಂಧೂರಿ ನಡುವಿನ ತಿಕ್ಕಾಟದಲ್ಲಿ ಅತಂತ್ರರಾದ ಡಿ.ರಂದೀಪ್

ಮೈಸೂರು: ಸಿಎಂ ಸಿದ್ದರಾಮಯ್ಯ ಹಾಗೂ ರೋಹಿಣಿ ಸಿಂಧೂರಿ ನಡುವಿನ ತಿಕ್ಕಾಟದಲ್ಲಿ ಐಎಎಸ್ ಅಧಿಕಾರಿ ಡಿ.ರಂದೀಪ್ ಅತಂತ್ರರಾಗಿದ್ದಾರೆ. ಮೈಸೂರಿನಲ್ಲೂ ಇರಲಾರದೆ ಹಾಸನಕ್ಕೂ ತೆರಳಲಾಗದೆ ನಿರ್ಗಮಿತ ಡಿಸಿ ರಂದೀಪ್ ಕಂಗಾಲಾಗಿದ್ದಾರೆ.

ವಾರದ ಹಿಂದೆ ಐಎಎಸ್ ಅಧಿಕಾರಿಗಳ ವರ್ಗವಣೆಯಲ್ಲಿ ಹಾಸನ ಡಿಸಿಯಾಗಿ ಡಿ.ರಂದೀಪ್ ವರ್ಗಾವಣೆಯಾಗಿದ್ದರು. ಹಾಸನದ ಡಿಸಿ ರೋಹಿಣಿ ಸಿಂಧೂರಿಯವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದ್ರೆ ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ರೋಹಿಣಿ ಸಿಂಧೂರಿ ತಡೆಯಾಜ್ಞೆ ತಂದಿದ್ದು, ಮಾರ್ಚ್ 21ರವರೆಗು ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರೆಯುವಂತೆ ತಡೆಯಾಜ್ಞೆ ಆದೇಶಿಸಿದೆ.

ಆದ್ರೆ ಅತ್ತ ಮೈಸೂರಿಗೆ ನೂತನ ಜಿಲ್ಲಾಧಿಕಾರಿ ಶಿವಕುಮಾರ್ ಆಗಮಿಸಿದ್ದು, ರಂದೀಪ್‍ಗೆ ಮೈಸೂರೂ ಇಲ್ಲದೆ ಹಾಸನವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಐಎಎಸ್ ಅಧಿಕಾರಿಗೇ ತಮ್ಮ ಕೆಲಸದ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ತಿಲ್ಲ. ಹೀಗಾಗಿ ಡಿಪಿಆರ್‍ಗೆ ನಿರ್ಗಮಿತ ಡಿಸಿ ಡಿ.ರಂದೀಪ್ 2 ಪತ್ರವನ್ನು ಬರೆದಿದ್ದು, ಐಎಎಸ್ ಅಧಿಕಾರಿಯ ಪತ್ರಕ್ಕೂ ಹಿರಿಯ ಅಧಿಕಾರಿಗಳು ಸ್ಪಂದಿಸಿಲ್ಲ.

ಈ ಹಿನ್ನೆಲೆಯಲ್ಲಿ ಅತ್ತ ಇತ್ತ ಎಲ್ಲಿಯೂ ಇಲ್ಲದೆ ಡಿ.ರಂದೀಪ್ ಖಾಲಿ ಕುಳಿತಿದ್ದಾರೆ. ಸದ್ಯ ಮೈಸೂರಿನ ತಮ್ಮ ಅಧಿಕೃತ ನಿವಾಸದಲ್ಲಿ ನೆಚ್ಚಿನ ನಾಯಿಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕೃತ ನಿವಾಸ ಬಿಟ್ಟುಕೊಡಬೇಕಿದೆ.

ಮಾರ್ಚ್ 21ರವರೆಗು ಐಎಎಸ್ ಅಧಿಕಾರಿ ಡಿ.ರಂದೀಪ್ ಅತಂತ್ರವಾಗಿಯೇ ಇರುವ ಪರಿಸ್ಥಿತಿ ಎದುರಾಗಿದೆ.

Comments

Leave a Reply

Your email address will not be published. Required fields are marked *