ಉಗ್ರರಿಂದ ಮಾನವೀಯತೆ ನಿರೀಕ್ಷೆ ಸಾಧ್ಯವಿಲ್ಲ: ಸುಷ್ಮಾ ಸ್ವರಾಜ್

– ಚೀನಾಕ್ಕೆ ಭಾರತದ ಸಂಬಂಧ ಮನವರಿಕೆ ಮಾಡಿಕೊಟ್ಟ ಸಚಿವೆ

ಬೀಜಿಂಗ್: ಭಯೋತ್ಪಾದಕರಿಂದ ನಾವು ಎಂದಿಗೂ ಮಾನವೀಯತೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಉಗ್ರರನ್ನು ಸೆದೆ ಬಡಿಯಲು ವಿಶ್ವದ ರಾಷ್ಟ್ರಗಳು ಒಂದಾಗಿ ಹೋರಾಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಚೀನಾದ ವೂಹನ್‍ನಲ್ಲಿ ನಡೆದ 16ನೇ ರಷ್ಯಾ-ಭಾರತ-ಚೀನಾ (ಆರ್‌ಐಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು. ಈ ವೇಳೆ ಮಂಗಳವಾರ ನಡೆದ ಏರ್ ಸ್ಟ್ರೈಕ್ ವಿಚಾರವಾಗಿ ಚೀನಾ ಹಾಗೂ ರಷ್ಯಾ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡುತ್ತಿದ್ದು, ಭಾರತದ ಮೇಲೆ ದಾಳಿ ಮಾಡಲು ಉಗ್ರರು ಪ್ಲಾನ್ ರೂಪಿಸಿದ್ದರು. ಹೀಗಾಗಿ ಸ್ವಯಂ ರಕ್ಷಣೆಗಾಗಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕ್ಯಾಂಪ್‍ಗಳ ಮೇಲೆ ದಾಳಿ ಮಾಡಿದ್ದೇವೆ. ನಾಗರಿಕರ ಸಾವು ನೋವು ತಪ್ಪಿಸಲು ದಾಳಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದು ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲ. ಭಾರತದ ಮೇಲೆ ಜೈಶ್ ಉಗ್ರ ಸಂಘಟನೆ ಮತ್ತೊಂದು ದಾಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬೇಕು ಎಂದು ನಾವು ಬಯಸುವುದಿಲ್ಲ. ಜವಾಬ್ದಾರಿಯುತವಾಗಿ ಉಗ್ರರನ್ನು ಮಟ್ಟ ಹಾಕಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ತಿಳಿದರು.

ಉಗ್ರರ ವಿರುದ್ಧ ಹೋರಾಡಲು ನಮ್ಮ ಜೊತೆ ಅನೇಕ ರಾಷ್ಟ್ರಗಳು ನಿಂತಿವೆ. ಇದು ನನಗೆ ತುಂಬಾ ಖುಷಿ ತಂದುಕೊಟ್ಟಿದೆ. ಭಾರತ ಉಗ್ರರ ವಿರುದ್ಧ ಕ್ರಮಕೈಗೊಂಡಿದೆ. ನಮ್ಮ ಗುರಿ ಭಯೋತ್ಪಾದನೆಯನ್ನ ನಿಲ್ಲಿಸುವುದು. ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ಬಿಡಬೇಕು. ಭಾರತೀಯ ವಾಯು ಪಡೆ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದೆ. ಅಲ್ಲಿನ ನಿವಾಸಿಗಳ ವಿರುದ್ಧ ಯುದ್ಧ ಸಾರಿಲ್ಲ ಎಂದು ಹೇಳಿದರು.

ಭಾರತ-ಚೀನಾ ಸಂಬಂಧ ಉಭಯ ರಾಷ್ಟ್ರಗಳಿಗೆ ಮುಖ್ಯವಾಗಿದೆ. ವೂಹನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ರಾಷ್ಟ್ರಪತಿ ಕ್ಸಿ ಜಿನ್‍ಪಿಂಗ್ ಅವರ ನಡುವೆ 2018 ಏಪ್ರಿಲ್‍ನಲ್ಲಿ ನಡೆದ ಸಭೆಯಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ ಎಂದು ಚೀನಾಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಭಯೋತ್ಪಾದನೆಯನ್ನು ಹತ್ತಿಕ್ಕಲು ನಮಗೆ ಜಗತ್ತಿನ ಸಹಾಯ ಬೇಕಿದೆ. ಪುಲ್ವಾಮಾ ದಾಳಿಯಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದಾರೆ. ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನದ ಕುಮ್ಮಕ್ಕಿನಿಂದ ದಾಳಿ ಮಾಡಿಸಿದೆ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *