ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

ನವದೆಹಲಿ: ಪಾಕಿಸ್ತಾನದಿಂದ ಹಾರಿ ಬಂದ ಜಾರ್ಜಿಯದ ಸರಕು ಸಾಗಾಣೆ ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಇಳಿಸಿದ ಘಟನೆ ಜೈಪುರದಲ್ಲಿ ನಡೆದಿದೆ.

ಜಾರ್ಜಿಯಾದ ಆಂಟೋನೋವ್ ಎಎನ್-12 ಹೆಸರಿನ ಬೃಹತ್ ಸರಕು ವಿಮಾನವು ಟಿಬಿಲಿಸಿಯಿಂದ ಕರಾಚಿ ಮಾರ್ಗವಾಗಿ ದೆಹಲಿಯಲ್ಲಿ ಇಳಿಯಬೇಕಿತ್ತು. ಆದರೆ ಏರ್ ಟ್ರಾಫಿಕ್ ಸರ್ವಿಸಸ್(ಎಟಿಎಸ್) ನೀಡಿದ್ದ ಅಧಿಕೃತ ಮಾರ್ಗವನ್ನು ಬದಲಾಯಿಸಿ ಶುಕ್ರವಾರ ಮಧ್ಯಾಹ್ನ 3:30 ವೇಳೆಗೆ ಗುಜರಾತಿನ ಕಛ್ ವಾಯು ನೆಲೆಯನ್ನು ವಿಮಾನ ಪ್ರವೇಶಿಸಿತ್ತು.

70 ಕಿ.ಮೀ ದೂರದಲ್ಲಿ ಭಾರತದ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕೂಡಲೇ ಭಾರತದ ವಾಯುಪಡೆ ಕೂಡಲೇ ಜಾಗೃತಗೊಂಡಿತ್ತು. ನಿಯಂತ್ರಣ ಕೊಠಡಿಗಳಿಂದ ರೇಡಿಯೊ ಕರೆಗಳನ್ನು ಮಾಡಿದರೂ ವಿಮಾನದ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನುಗ್ಗಿಸುತ್ತಿದ್ದ.

ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಉತ್ತರ ಭಾರತದ್ಯಾಂತ ಅಲರ್ಟ್ ಘೋಷಿಸಲಾಯಿತು. ಕೂಡಲೇ ರಾಜಸ್ಥಾನ ಜೋಧ್‍ಪುರ ಮತ್ತು ಉತ್ತರ ಪ್ರದೇಶದಲ್ಲಿರುವ ರಾಯ್‍ಬರೇಲಿ ವಾಯು ನೆಲೆಯಿಂದ ಎರಡು ಸುಖೋಯ್ ಯುದ್ಧ ವಿಮಾನಗಳನ್ನು ಕಳುಹಿಸಿ 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಕಾರ್ಗೋ ವಿಮಾನವನ್ನು ಬಲವಂತವಾಗಿ ಸಂಜೆ 4:30ಕ್ಕೆ ಜೈಪುರದಲ್ಲಿ ಇಳಿಸಲಾಯಿತು.

ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಬ್ಬರು ಪೈಲಟ್, ಆರು ಸಿಬ್ಬಂದಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ವಿಮಾನ ವಾಯು ಮಾರ್ಗವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು. ಇದು ಗಂಭೀರವಾದ ಉಲ್ಲಂಘನೆ ಅಲ್ಲ. ವಿಚಾರಣೆ ಬಳಿಕ  ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ವಿಮಾನ ಜೈಪುರದಲ್ಲಿ ಲ್ಯಾಂಡ್ ಆಗದೇ ಇದ್ದರೆ ಯುದ್ಧ ವಿಮಾನಗಳು ಸರಕು ವಿಮಾನವನ್ನು ಹೊಡೆದು ಉರುಳಿಸಲು ಮುಂದಾಗಿತ್ತು.

Comments

Leave a Reply

Your email address will not be published. Required fields are marked *