ಮುಂಬೈ: 2022ರ IPL ಆವೃತ್ತಿ ಹೊಸ – ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ. ಕಳೆದ ಐಪಿಎಲ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿ ಟೀಂ ಇಂಡಿಯಾದಿಂದ ಹೊರಗುಳಿಯುವ ಸಾಧ್ಯತೆಗಳಿದ್ದ ಪ್ಲೇಯರ್‌ಗಳು ಈ ಬಾರಿ ಬೆಸ್ಟ್ ಕ್ರಿಕೆಟರ್ಸ್ ಎನ್ನಿಸಿಕೊಂಡಿದ್ದಾರೆ. ಇನ್ನು ಕೆಲ ಹಿರಿಯ ಆಟಗಾರರು ಲಯ ಕಂಡುಕೊಂಡು ಶಹಬ್ಬಾಸ್ ಎನಿಸಿಕೊಳ್ಳುತ್ತಿದ್ದಾರೆ.

ಟೀ-20 ವಿಶ್ವಕಪ್‌ನಲ್ಲಿ ಕಳೆದ ಬಾರಿ ಲೀಗ್ ಹಂತದಲ್ಲೇ ಹೊರಗುಳಿದಿದ್ದ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದು, ಅದಕ್ಕಾಗಿ ಯಾವೆಲ್ಲಾ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಚರ್ಚೆಯನ್ನೂ ನಡೆಸುತ್ತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಸುನೀಲ್ ಗವಾಸ್ಕರ್ ಓರ್ವ ಆಟಗಾರನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಟೀಕೆಗಳ ನಡುವೆಯೂ ಮೈಲಿಗಲ್ಲು ಸಾಧಿಸಿದ ಕಿಂಗ್ ಕೊಹ್ಲಿ
ಒಂದು ವೇಳೆ ನಾನು ಆಯ್ಕೆಗಾರರ ಸಮಿತಿಯಲ್ಲಿದ್ದರೆ, ಆತನನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಎಂದು ಭರವಸೆ ನೀಡಿದ್ದಾರೆ. ಅದು ಮತ್ಯಾರೂ ಅಲ್ಲ, ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್.

ಈ ಕುರಿತು ಮಾತನಾಡಿರುವ ಸಿಂಗ್, ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನನ್ನ ಪ್ರಕಾರ, ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಫಿನಿಷರ್ ಯಾರೆಂದರೆ ಅದು ದಿನೇಶ ಕಾರ್ತಿಕ್. ಅವರು ಆಫ್ ಸೈಡ್‌ಗಿಂತಲೂ ಲೆಗ್ ಸೈಡ್‌ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗಿಂತ ಉತ್ತಮ ಫಿನಿಷರ್ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಆಯ್ಕೆಗಾರನಾದರೆ, ದಿನೇಶ್ ಕಾರ್ತಿಕ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲಿದ್ದೇನೆ. ಆತ ಅರ್ಹನಾಗಿದ್ದಾನೆ. ಟೀಂ ಇಂಡಿಯಾಕ್ಕೆ ಅತ್ಯುತ್ತಮ ಫಿನಿಶರ್ ಬೇಕೆಂದಿದ್ದರೆ ಅದು ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಆಗಿರಬೇಕು. ಅವರು ತಂಡವನ್ನು ಬಲಿಷ್ಠಗೊಳಿಸುತ್ತಾರೆ ಎಂದು ಹರ್ಭಜನ್ ಹೇಳಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

15ನೇ ಆವೃತ್ತಿಯ ಐಪಿಎಲ್‌ನ 12 ಪಂದ್ಯಗಳಲ್ಲಿ 274 ರನ್‌ಗಳಿಸಿರುವ ದಿನೇಶ್ ಕಾರ್ತಿಕ್ ಕೆಲ ಮ್ಯಾಚ್‌ಗಳಲ್ಲಿ ಉತ್ತಮ ಫಿನಿಶರ್ ಆಗಿ ಬ್ಯಾಟಿಂಗ್ ಅಬ್ಬರಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡದೊಂದಿಗೆ ಟಿ20 ಸರಣಿ ನಡೆಯಲಿದೆ. ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸಹ, ಕಳೆದ ಬಾರಿ ಟಿ20 ವರ್ಲ್ಡ್ ಕಪ್‌ನಲ್ಲಿ ದಿನೇಶ್ ಕಾರ್ತಿಕ್ ಆಯ್ಕೆಯಾಗಲಿಲ್ಲ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಅವರು ಆಡಿದ ರೀತಿ ಉತ್ತಮವಾಗಿದೆ. ನಾನು ಆಯ್ಕೆ ತಂಡದಲ್ಲಿದ್ದರೆ, ಖಂಡಿತವಾಗಿ ದಿನೇಶ್ ಕಾರ್ತಿಕ್ ಅವರನ್ನು ಟಿ20 ವರ್ಲ್ಡ್ ಕಪ್‌ಗೆ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ರೇಸ್‌ನಲ್ಲಿ ಪಾಂಡ್ಯ: ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಈ ಬಾರಿ ಹೊಸ ತಂಡದ ಮೂಲಕ ನಾಯಕನಾಗಿ ಪ್ರತಿನಿಧಿಸಿದ್ದು, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. ತಂಡದ ನಾಯಕನಾಗಿ ಉತ್ತಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಐಪಿಎಲ್‌ನ 12 ಪಂದ್ಯಗಳಲ್ಲಿ 273 ರನ್‌ಗಳನ್ನು ಸಿಡಿಸಿ, ತಂಡ ಸೇರ್ಪಡೆಯಾದ ಮೊದಲ ಐಪಿಎಲ್‌ನಲ್ಲೇ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply