ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ: ಡಿಸಿಎಂ ಕಿಡಿ

ತುಮಕೂರು: ಸಿಎಂ ಆಯ್ತು ಈಗ ಡಿಸಿಎಂ ಸರದಿ. ಡಿಸಿಎಂ ಜಿ.ಪರಮೇಶ್ವರ್ ಕೂಡಾ ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ ಎಂದು ಕಿಡಿಕಾರಿದ್ದಾರೆ.

ಭಾನುವಾರ ಕೊರಟಗೆರೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮದವರು ನಮ್ಮ ಜೊತೆನೆ ಇರುತ್ತಾರೆ, ಜೊತೆಯಲ್ಲಿ ಕಾಫಿ ಕುಡಿತಾರೆ, ಊಟ ಮಾಡ್ತಾರೆ ಹಾಗೂ ನಗುನಗುತ್ತಾ ಇರುತ್ತಾರೆ. ಆದರೂ ನಮ್ಮ ವಿರುದ್ಧವಾಗಿ ಸುದ್ದಿ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಯಾವ ಮಾಧ್ಯಮದವರು ಆ ಸುದ್ದಿಯನ್ನು ಕೊಟ್ಟಿದ್ದಾರೆ. ನನಗೆ ಮಾಹಿತಿ ನೀಡಿ ಎಂದು ಕೇಳಿದೆ. ಏಕೆಂದರೆ ಅವರು ಸುಳ್ಳು ಸುದ್ದಿ ಕೊಟ್ಟರೆ ನಾನು ಸುಮ್ಮನಿರಲ್ಲ. ನನ್ನ ತಪ್ಪು ಇದ್ದರೆ ಹೇಳಿ ತಿದ್ದಿಕೊಳ್ಳುತ್ತೇನೆ. ದಯವಿಟ್ಟು ಯಾರದ್ದೋ ತಪ್ಪನ್ನು ನನ್ನ ತಲೆಗೆ ಕಟ್ಟಿ ಅವಮಾನ ಮಾಡುವ ರೀತಿ ಮಾಡಬೇಡಿ. ನಾವು ಸಾರ್ವಜನಿಕರ ಬದುಕಿನಲ್ಲಿ ಹತ್ತಾರು ವರ್ಷ ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡು ಬರುತ್ತೇವೆ. ಅದನ್ನು ನೀವು 2 ನಿಮಿಷದಲ್ಲೇ ಮಾನ ಹರಾಜು ಮಾಡಬೇಡಿ. ಇದು ನನ್ನ ಮನವಿ ಎಂದರು.

ಆರಂಭದಲ್ಲಿ ವಿರುದ್ಧ ಸುದ್ದಿ ಮಾಡಿದವರಿಗೆ ಸುಮ್ಮನೆ ಬಿಡಲ್ಲ ಎಂದಿದ್ದ ಡಿಸಿಎಂ ಬಳಿಕ ಮನವಿ ಎಂದು ಸಮಾಧಾನ ಮಾಡಿದರು. ಡಿಸಿಎಂ ತೆರಳುವ ದಾರಿಯಲ್ಲಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಕೆಸ್ತೂರು ಪಿಡಿಒ ಬಿಜೆಪಿ ಕಾರ್ಯಕರ್ತನಿಗೆ ನೋಟಿಸ್ ನೀಡಿದ್ದ ಸುದ್ದಿ ಸುಳ್ಳು ಎನ್ನುವುದು ಡಿಸಿಎಂ ವಾದವಾಗಿತ್ತು. ಪಿಡಿಒ ಕೊಟ್ಟಿರುವ ನೋಟಿಸ್ ಪ್ರತಿ, ಪಿಡಿಒ ವನಜಾಕ್ಷಿ ಹೇಳಿಕೆಯ ಬೈಟ್ ಸಾಕ್ಷ್ಯ ಇದ್ದರೂ ಈ ಸುದ್ದಿ ಸುಳ್ಳು ಎಂದು ಜಿ. ಪರಮೇಶ್ವರ ತೀರ್ಮಾನಕ್ಕೆ ಬಂದು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *