ಖರ್ಗೆ ಸಿಎಂ ಆದ್ರೆ ಸ್ವಾಗತಿಸುತ್ತೇನೆ: ಉಮೇಶ್ ಜಾಧವ್

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗೋದಾದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ದಲಿತರೊಬ್ಬರು ಸಿಎಂ ಆಗುತ್ತಾರೆ ಎಂದರೆ ನಾನು ಕೂಡ ಖುಷಿ ಪಡುತ್ತೇನೆ. ಖರ್ಗೆಯವರನ್ನು ನಾನು ಸೋಲಿಸಿಲ್ಲ. ಕ್ಷೇತ್ರದ ಮತದಾರರು ಅವರನ್ನು ಸೋಲಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ನೀರಿನ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿವೆ. ಒಳ್ಳೆಯ ಆಡಳಿತ ನೀಡಬೇಕು. ಸ್ಥಿರವಾದ ಸರ್ಕಾರ ಬೇಕು ಅನ್ನೋ ಆಸೆ ಜನರಿಗಿದೆ. ಕ್ಷೇತ್ರದ ಜನರ ಸಮಸ್ಯೆಗಳು ಈಡೇರದೇ ಇದ್ದಾಗ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಶಾಸಕರು ರೆಬೆಲ್ ಆಗಿದ್ದಾರೆ ಎಂದು ಉಮೇಶ್ ಜಾಧವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಸಂಸದನಾಗಿದ್ದೇನೆ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ರಾಜ್ಯದ ಮೈತ್ರಿ ಸರ್ಕಾರ ಉಳಿಯುತ್ತೋ, ಉರುಳುತ್ತೋ ನನಗೆ ಗೊತ್ತಿಲ್ಲ. ಮಗನ ವಿದ್ಯಾಭ್ಯಾಸ ನಿಮಿತ್ತ ಕುಟುಂಬ ಸಮೇತ ನಾನು ಮುಂಬೈಗೆ ಹೋಗುತ್ತಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *