ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗ್ಲೇ ಸುದ್ದಿ ಕೇಳಿ ಆಘಾತವಾಯ್ತು- ವೀರೇಂದ್ರ ಹೆಗ್ಗಡೆ

ಮಂಗಳೂರು: ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಶಿರೂರು ಶ್ರೀಗಳ ಆರೋಗ್ಯ ಸರಿಯಿಲ್ಲವೆಂದು ತಿಳಿದುಪಟ್ಟೆ. ಹೀಗಾಗಿ ಸ್ವಾಮಿಯ ಪೂಜೆ ಸಲ್ಲಿಸಿದ ಬಳಿಕ ಅವರ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗಲೇ ಶಿರೂರು ಶ್ರೀ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಅಂತ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೀಗ ಶಿರೂರು ಶ್ರೀಗಳು ನಮ್ಮನ್ನು ಅಗಲಿ ಹೋಗಿದ್ದಾರೆ. ಅವರು ಅಷ್ಟಮಠದ ಸನ್ಯಾಸಿಯಾಗಿರದೇ, ಖ್ಯಾತ ಸಂಗೀತಗಾರ, ಈಜುಪಟು ಹಾಗೂ ವಿದ್ವಾಂಸರಾಗಿದ್ದರು. ಇಷ್ಟು ಮಾತ್ರವಲ್ಲದೇ ಒಳ್ಳೆಯ ಸ್ನೇಹ ಜೀವಿಯಾಗಿದ್ದರು. ನಮ್ಮೊಂದಿಗೆ ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು ಅಂತ ಹೇಳಿದ್ರು.

ಶ್ರೀಗಳು ಮಠದಲ್ಲಿನ ಮೂಲವಿಗ್ರಹಕ್ಕಾಗಿ ಕಾನೂನು ಹೋರಾಟವನ್ನು ಮಾಡುತ್ತಿದ್ದರು. ಅಲ್ಲದೇ ಅವರು ಅದರಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೂ ಎಂದು ತಿಳಿದು ಬಂದಿದ್ದರಿಂದ ಕಳೆದ 2 ತಿಂಗಳ ಹಿಂದೆ ನಮ್ಮ ಆರೋಗ್ಯ ಕೇಂದ್ರದ ಪ್ರತಿನಿಧಿಯನ್ನು ಅವರಲ್ಲಿಗೆ ಕಳುಹಿಸಿಕೊಟ್ಟಿದ್ದೆ. ಆದರೆ ಅವರು ಅದನ್ನು ತಿರಸ್ಕರಿಸಿ, ಅಷ್ಟೇನು ತೊಂದರೆಯಿಲ್ಲ ಎಂದು ಹೇಳಿದ್ದರು.

ಶ್ರೀಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿಬೇಕಿತ್ತು. ಮೂಲವಿಗ್ರಹದ ಕುರಿತು ನಡೆಯುತ್ತಿದ್ದರ ಬಗ್ಗೆ ಯಾವುದೇ ಮಾಹಿತಿ ನನ್ನ ಬಳಿ ಹಂಚಿಕೊಂಡಿರಲಿಲ್ಲ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಯಾಕೆ ಅವರು ಅಷ್ಟೊಂದು ದೃಢ ನಿರ್ಧಾರ ತೆಗೆದುಕೊಂಡರು ಎಂದು ಗೊತ್ತಾಗುತ್ತಿಲ್ಲ. ಅಲ್ಲದೇ ಅವರು ನೇರ-ನುಡಿಗೆ ಹೆಸರಾಗಿದ್ದರೂ, ಹೀಗಾಗಿಯೇ ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೆಗ್ಗಡೆಯವರು ತಿಳಿಸಿದ್ರು.

55 ವರ್ಷದ ಶಿರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ರಕ್ತವಾಂತಿ ಮಾಡಿದ್ದರಿಂದ ನಿನ್ನೆ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಗದೇ ಆಸ್ಪತ್ರೆಯಲ್ಲಿಯೇ ವಿಧಿವಶರಾಗಿದ್ದಾರೆ.

Comments

Leave a Reply

Your email address will not be published. Required fields are marked *