ಐಟಿ ರೇಡ್: ರಾಜ್ಯದ ಸಂಸದರಿಗೆ ಮೋದಿಯಿಂದ ಜಾಣ್ಮೆಯ ಪಾಠ

ನವದೆಹಲಿ: ರಾಜ್ಯದಲ್ಲಿ ಐಟಿ ದಾಳಿ ವಿಚಾರವಾಗಿ ಯಾರೂ ಪೇಚಿಗೆ ಸಿಲುಕಿಸುವ ಹೇಳಿಕೆ ಕೊಡಬೇಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಜಾಣ್ಮೆಯ ಪಾಠವನ್ನು ಹೇಳಿದ್ದಾರೆ.

ಶುಕ್ರವಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ದಕ್ಷಿಣ ಭಾರತದ ಬಿಜೆಪಿ ಸಂಸದರನ್ನುದ್ದೆಶಿಸಿ ಮೋದಿ ಮಾತನಾಡಿದರು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಸಂಸದರಾದ ಬಿ.ಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಹಾಜರಿದ್ದರು.

ದಾಳಿಗೂ, ಬಿಜೆಪಿಗೂ ಸಂಬಂಧವೇ ಇಲ್ಲ ಎನ್ನುವ ಹೇಳಿಕೆಗಳಿಗೆ ಬದ್ಧರಾಗಿರಿ. ಅಮಿತ್ ಶಾ ನಿಮ್ಮ ರಾಜ್ಯಕ್ಕೆ ಹೋಗಿ ಬಂದಮೇಲೆ ಸಾಕಷ್ಟು ರಾಜಕೀಯ ಬದಲಾವಣೆಗಳು ಆಗುತ್ತವೆ. ಎಲ್ಲದಕ್ಕೂ ನೀವು ಸಿದ್ಧರಾಗಿರಬೇಕು. ಚುನಾವಣಾ ಯುದ್ಧಕ್ಕೆ ನೀವು ಸಿದ್ಧರಾಗಿ. ತಂತ್ರ ಅಸ್ತ್ರಗಳನ್ನು ನಾವು ತಯಾರು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

ದೆಹಲಿಯಲ್ಲಿ ರಾಜ್ಯ ಸಂಸದರ ಜೊತೆ ಮೋದಿ ಸುಮಾರು 40 ನಿಮಿಷ ಚರ್ಚೆ ನಡೆಸಿದ್ದಾರೆ. ಇದೇ ವೇಳೆ, ರಾಜ್ಯ ಬಿಜೆಪಿ ಸಂಸದರನ್ನು ತರಾಟೆ ತೆಗೆದುಕೊಂಡಿದ್ದಾರೆ. ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ನೀವು ವಿಫಲರಾಗಿದ್ದೀರಿ. ನಿಮ್ಮ ಕಾರ್ಯವೈಖರಿ ಸರಿಯಾಗಿಲ್ಲ. ಫಸಲ್ ಭೀಮಾ, ಉಜ್ವಲ ಯೋಜನೆಗಳನ್ನು ಪ್ರಚಾರ ಮಾಡಿ, ಕೇಂದ್ರದ ಅನುದಾನಗಳ ಬಗ್ಗೆ ಪ್ರಚಾರ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

Comments

Leave a Reply

Your email address will not be published. Required fields are marked *