ಕಾಂಗ್ರೆಸ್‌ ಮುಖವಾಣಿ; ಕೇರಳದ ʻಜೈಹಿಂದ್‌ ಟಿವಿʼ ಚಾನೆಲ್‌ ಬ್ಯಾಂಕ್‌ ಖಾತೆಗಳು ಫ್ರೀಜ್‌!

– ಚಾನೆಲ್‌ಗೆ ಡಿಕೆಶಿ ಕುಟುಂಬ ಹೂಡಿಕೆ ಬಗ್ಗೆ ಮಾಹಿತಿ ಕೇಳಿದ್ದ ಸಿಬಿಐ

ಬೆಂಗಳೂರು/ತಿರುವನಂತಪುರಂ: ಕಾಂಗ್ರೆಸ್‌ ಮುಖವಾಣಿ ಸಂಸ್ಥೆ ಕೇರಳದ ʻಜೈಹಿಂದ್ ಚಾನೆಲ್‌ʼನ ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ (Income Tax department) ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ʻಜೈಹಿಂದ್ ಟಿವಿ’ಯ (Jai Hind TV channel) ಮಾತೃಸಂಸ್ಥೆಯಾದ ಭಾರತ್ ಬ್ರಾಡ್ ಕಾಸ್ಟಿಂಗ್ ಕಂಪನಿಯಿಂದ ಬಾಕಿ ಇರುವ ತೆರಿಗೆ ಮೊತ್ತವನ್ನು ವಸೂಲಿ ಮಾಡುವಂತೆ ಎರಡು ಪ್ರಮುಖ ಖಾಸಗಿ ಬ್ಯಾಂಕುಗಳಿಗೆ ಇಲ್ಲಿನ ಕೇಂದ್ರ GST ಮತ್ತು ಅಬಕಾರಿ ಕಚೇರಿಯ ಸಹಾಯಕ ಆಯುಕ್ತರು ಇತ್ತೀಚೆಗೆ ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ಈಗ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಸಂಸ್ಥೆಯ ಖಾತೆಗಳನ್ನು ಸ್ಥಗಿತಗೊಳಿಸಿ ಕೈಗೊಂಡಿರುವ ಕ್ರಮಕ್ಕೂ, 7 ವರ್ಷಗಳ ಹಿಂದಿನ ಸೇವಾ ತೆರಿಗೆ ಬಾಕಿಗೆ ಸಂಬಂಧಿಸಿದ ಇದೇ ಸಂಸ್ಥೆಗೆ ಸಂಬಂಧಿಸಿದ ಪ್ರಕರಣಕ್ಕೂ ನಂಟಿದೆ. ಸೇವಾ ತೆರಿಗೆ ಬಾಕಿ ಕುರಿತ ಪ್ರಕರಣದ ವಿಚಾರಣೆ ಸದ್ಯ ಕೇರಳ ಹೈಕೋರ್ಟ್‌ನಲ್ಲಿ (Kerala Highcourt) ನಡೆಯುತ್ತಿದೆ. ಈ ನಡುವೆ ಇಲಾಖೆ ಕೈಗೊಂಡಿರುವ ಈ ದಿಢೀರ್ ಕ್ರಮ ದುರದೃಷ್ಟಕರ ಮಾತ್ರವಲ್ಲ. ಇದರಿಂದ ಚಾನೆಲ್ ಸಂಕಷ್ಟಕ್ಕೆ ಸಿಲುಕಿದೆ ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿಜು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

ಡಿಕೆಶಿ ಹೂಡಿಕೆ ಬಗ್ಗೆ ಮಾಹಿತಿ ಕೇಳಿದ್ದ ಸಿಬಿಐ:
ಸದ್ಯ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾ‌ರ್ ಮತ್ತು ಅವರ ಕುಟುಂಬ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿವರ ನೀಡುವಂತೆ ಸಂಸ್ಥೆಗೆ ಕಳೆದ ಡಿಸೆಂಬರ್ 22ರಂದು ಸಿಬಿಐ ನೋಟಿಸ್ ನೀಡಿತ್ತು. ಈ ವಿಚಾರವಾಗಿ ನಾವು ತನಿಖಾ ಸಂಸ್ಥೆಗೆ ಸಹಕಾರ ನೀಡುತ್ತಿದ್ದೇವೆ. ಇದಾದ ನಂತರ, ನಾವು ಕೇಂದ್ರದ ವಿವಿಧ ಇಲಾಖೆಗಳಿಂದ 10ಕ್ಕೂ ಹೆಚ್ಚು ನೋಟಿಸ್‌ಗಳನ್ನು ಪಡೆದಿದ್ದೇವೆ ಎಂದು ಶಿಜು ಹೇಳಿದ್ದಾರೆ.

ಡಿಕೆಶಿ ಕುಟುಂಬದಿಂದ 25 ಲಕ್ಷ ರೂ. ಹೂಡಿಕೆ?:
2016-17 ರಲ್ಲಿ ಕೇರಳದ ಜೈಹಿಂದ್ ಪ್ರೈವೇಟ್ ಲಿಮಿಟೆಡ್‌ಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಕುಟುಂಬ 25 ಲಕ್ಷ ರೂ. ಹೂಡಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆ ಶಿವಕುಮಾರ್‌ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏರ್‌ಪೋರ್ಟ್ ಸ್ಫೋಟಿಸುತ್ತೇನೆ- ‌ ಬೆದರಿಕೆ ಕರೆ ಮಾಡಿ ಮೊಬೈಲ್‌ ಸ್ವಿಚ್ಛ್‌ ಆಫ್‌ ಮಾಡ್ಕೊಂಡ!

115 ಕೋಟಿ ಹಣ ಫ್ರೀಜ್‌:
ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದ ಮರು ದಿನವೇ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆ ನಡೆದಿದೆ. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾದ 210 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸದ ಕಾರಣ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಗುರುವಾರ ರಾತ್ರಿಯಿಂದಲೇ ಮುಟ್ಟುಗೋಲು ಹಾಕಿಕೊಂಡಿರುವುದು ವರದಿಯಾಗಿದೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ ಆದೇಶದ ಬಳಿಕ ಬ್ಯಾಂಕ್‌ ಖಾತೆಗಳು ಚಾಲ್ತಿಗೆ ಬಂದಿದ್ದರೂ 115 ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಫ್ರೀಜ್‌ ಮಾಡಲಾಗಿದೆ. 115 ಕೋಟಿ ರೂ. ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಿ, ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಉಳಿದ ಹಣವನ್ನು ವಿನಿಯೋಗ ಮಾಡುತ್ತೇವೆ ಎಂದು ಅಜಯ್‌ ಮಾಕೆನ್‌ ಹೇಳಿದರು. ಇದನ್ನೂ ಓದಿ: ಹಳಿ ತಪ್ಪಿದ ರೈತರ ಪ್ರತಿಭಟನೆ; ಕತ್ತಿ ಝಳಪಿಸಿದ ನಿಹಾಂಗ್‌ ಸಿಖ್ಖರು – ಖಲಿಸ್ತಾನಿ ಉಗ್ರನ ಫೋಟೋ ಪತ್ತೆ!