ನಿಖಿಲ್ ಪಟ್ಟಾಭಿಷೇಕದ ವೇಳೆ ಎಚ್‍ಡಿಕೆ ಸಿಎಂ ಆದ ಕಥೆ ಬಿಚ್ಚಿಟ್ಟ ಎಚ್‍ಡಿಡಿ

ಮಂಡ್ಯ: ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆ ವೇಳೆ ಕುಮಾರಸ್ವಾಮಿ ಸಿಎಂ ಆಗಿದ್ದು ಹೇಗೆ ಎನ್ನುವ ಕಥೆಯನ್ನು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಗೆ ಮೊಮ್ಮಗ ನಿಖಿಲ್ ರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಜೆಡಿಎಸ್ ಪಕ್ಷಕ್ಕೆ 37 ಸ್ಥಾನ ಲಭ್ಯವಾದ ವೇಳೆ ಕಾಂಗ್ರೆಸ್ ಹೈಕಮಾಂಡ್ ತನ್ನ ನಾಯಕರನ್ನು ನಮ್ಮ ಬಳಿಗೆ ಕಳುಹಿಸಿ ಕುಮಾರಸ್ವಾಮಿ ಅವರೇ ಸಿಎಂ ಆಗುವಂತೆ ಮನವಿ ಮಾಡಿದ್ದರು. ಆದರೆ ನಾನು ವಾಸ್ತವ ತಿಳಿಸಿ ಸಿಎಂ ಬೇಡ ಎಂದು ತಿಳಿಸಿದೆ. ಏಕೆಂದರೆ ಕುಮಾರಸ್ವಾಮಿ ಅವರಿಗೆ ಆ ವೇಳೆಗೆ 2 ಆಪರೇಷನ್ ಆಗಿತ್ತು. ಅದಕ್ಕೆ ಸಿಎಂ ಸ್ಥಾನಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆಗ ಪಕ್ಕದಲ್ಲೇ ಇದ್ದ ಖರ್ಗೆಗೆ ಬೆಂಬಲ ನೀಡುತ್ತೇನೆ ಸಿಎಂ ಮಾಡಿ ಎಂದಿದ್ದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎಂದರು ವಿವರಿಸಿದರು.

ನನ್ನ ಮೊಮ್ಮಗನನ್ನು ರಾಜಕೀಯಕ್ಕೆ ತರುವುದು ಜನರ ಒತ್ತಡವೇ ಕಾರಣ. ನಿಖಿಲ್ ಸಿನಿಮಾ ರಂಗದಲ್ಲೇ ಚೆನ್ನಾಗಿದ್ದ, ಆದರೆ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಡಿದ್ದ ವೇಳೆ ನಿಖಿಲ್ ತಂದೆಗೆ ಬೆಂಬಲ ನೀಡಿ ಪಕ್ಷ ಕಟ್ಟುವ ಕೆಲಸ ಮಾಡುವ ಆಸೆಯಿಂದ ಈ ನಿರ್ಧಾರ ಮಾಡಿದ್ದೇನೆ. ನಾನು ನಮ್ಮ ತಂದೆಗೆ 2ನೇ ಹೆಂಡತಿಯ ಮಗ, ನಮ್ಮ ಕುಟುಂಬಕ್ಕೆ ಅಂದು ನೀವು ಬೆಂಬಲ ಇಂದಿಗೂ ಇದೆ ಎಂದು ನೆನಪಿಸಿಕೊಂಡರು. ನಿಮ್ಮ ಸೇವೆ ಮುಂದುವರಿಸಲು ನಿಮ್ಮ ಬೆಂಬಲ ಅಗತ್ಯ ಇದೆ ಎಂದರು.

ನಾನು ಪ್ರಧಾನಿಯಾಗಿ ಮಾಡಿದ ಕಾರ್ಯ ಇಂದು ಗುರುತಿಸುವ ಕಾರ್ಯ ನಡೆಯುತ್ತಿದೆ. ನಾನು ಮಾಡಿದ ಕಾರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಅವಧಿಯಲ್ಲೇ ಯೂರಿಯಾ ಬೆಲೆ ಕಡಿಮೆ ಮಾಡಿದ್ದೆ. ನನ್ನ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶದಲ್ಲಿ ಇಂತಹ ಸಂದಿಗ್ಧ ಸ್ಥಿತಿ ನಿರ್ಮಾಣ ಆಗಿದೆ. ಬಿಜೆಪಿಯ ದುರಾಡಳಿತಕ್ಕೆ ಈಗಾಗಲೇ ಜನ ಉತ್ತರ ನೀಡಿದ್ದಾರೆ. ಅದಕ್ಕೆ 5 ರಾಜ್ಯಗಳ ಚುನಾವಣೆಯೇ ನಿಮ್ಮ ಮುಂದಿದೆ. ಕಾಂಗ್ರೆಸ್ ಮುಕ್ತ ಭಾರತ ಎಂದಿದ್ದ ಮೋದಿ ಅವರಿಗೆ ಜನರು ಸೂಕ್ತ ಸಂದೇಶ ನೀಡಿದ್ದಾರೆ. ಈಗ ಕಾಂಗ್ರೆಸ್, ಜೆಡಿಎಸ್ ಎಲ್ಲವನ್ನು ಮರೆತು ಒಂದೇ ತಾಯಿಯ ಮಕ್ಕಳಂತೆ ಮುನ್ನಡೆಯ ಬೇಕು ಎಂದು ಕರೆ ನೀಡಿದರು.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಾನು ಭಾವುಕನಾಗಿದ್ದೆ, ಆದರೆ ಇಂದು ಆಗಲ್ಲ. ಹಾಸನದಲ್ಲಿ ನಾನು 60 ವರ್ಷದ ಹಿಂದೆ ಯುವಕನಾಗಿ ಬಂದ ನನಗೆ ಮೂಡಲಹಿಪ್ಪೆ ಜನ ಬೆಂಬಲ ನೀಡಿದ್ದರು. ಅವರನ್ನು ನೋಡಿ ನಾನು ಭಾವುಕನಾದೆ. ಆದರೆ ಇದನ್ನು ಮಾಧ್ಯಮಗಳು ಅಪಹಾಸ್ಯ ಮಾಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡುವ ಸ್ಥಿತಿ ರಾಜಕೀಯಕ್ಕೆ ಬಂದಿದೆ. ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *