ಕುಂಕುಮಧಾರಿಯನ್ನ ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಕುಂಕಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರು ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಟ್ಟಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಕುಂಕುಮ ನಾಮ, ಕಾವಿ ಬಟ್ಟೆಗಳೆಲ್ಲ ಭಾರತೀಯ ಧಾರ್ಮಿಕ ಪರಂಪರೆಯ ಭಾಗ, ಅದಕ್ಕೊಂದು ಪಾವಿತ್ರ್ಯ ಇತ್ತು. ಆದರೆ ಯಾವಾಗ ಬಿಜೆಪಿ ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅದ ನಂತರ ಕುಂಕುಮ, ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ. ಉತ್ತರ ಪ್ರದೇಶದಲ್ಲೊಬ್ಬರು ಬಿಜೆಪಿ ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್ ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ?

ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್ ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು. ಏನಿವಾಗ? ನಾನು ಬಿಜೆಪಿ ನಾಯಕರಿಗಿಂತ ಒಳ್ಳೆಯ ಹಿಂದು. ನಾನೆಂದೂ ಅವರಂತೆ ತಿಲಕ, ಕಾವಿ, ಧರ್ಮಗಳನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿಲ್ಲ. ನನ್ನದು ಜನಪರ ರಾಜಕಾರಣ, ದೇವರು, ಧರ್ಮ ಎಲ್ಲ ನನ್ನ ಮನೆಯೊಳಗಿನ ನಂಬಿಕೆ.

ಮಂಗಳವಾರ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆಂದೂರು ಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಾಕೋ ಗೊತ್ತಿಲ್ಲ ನನಗೆ ಹಣೆಗೆ ಉದ್ದ ನಾಮ (ತಿಲಕ) ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಕಿಚಾಯಿಸಿದ್ದರು. ಇದೀಗ ಟ್ವೀಟ್ ಮಾಡುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *