ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟು ಹುಬ್ಬಳ್ಳಿ, ಧಾರವಾಡ ದೊಡ್ಡ ಜಿಲ್ಲೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನನಗೆ ಸಚಿವನಾಗುವ ಭರವಸೆ ಇತ್ತು. ವಿಧಾನಸಭೆ ಪರಿಷತ್ತಿನಲ್ಲಿ ನಾನೇ ಹಿರಿಯ ಸದಸ್ಯ. ಆದರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ಕೈಬಿಟ್ಟಿದ್ದು ಯಾಕೆ ಅಂತ ಗೊತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಎಂದು ಭಾವಿಸಿ ಸುಮ್ಮನಿದ್ದೇನೆ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನನಗೆ ವಿಧಾನ ಪರಿಷತ್ ಸಭಾಪತಿ ಹುದ್ದೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಿಕೆ, ಟಿವಿಯಲ್ಲಿ ನೋಡಿದ್ದೇನೆ. ನನಗೆ ಯಾರು ಈ ಬಗ್ಗೆ ಸ್ಟಷ್ಟವಾಗಿ ಹೇಳಿಲ್ಲ. ದೇವೇಗೌಡರು ಕಾರ್ಯಕರ್ತರ ಮುಂದೆ ಈ ಸಭಾಪತಿ ಹುದ್ದೆ ನೀಡುವ ಬಗ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ನನಗೆ ಶಿಕ್ಷಣ ಸಚಿವನಾಗುವ ಬಯಕೆ ಇತ್ತು, ಕೈಕಟ್ಟಿ ಕುರುವ ಸಭಾಪತಿ ಸ್ಥಾನ ಬೇಡ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕದ ಶಾಸಕರಿಗೆ ಅನ್ಯಾಯ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರ ಮನಸ್ಸಿನಲ್ಲಿ ಈ ರೀತಿಯ ಭಾವನೆ ಮೂಡುತ್ತಿದೆ. ನನ್ನನ್ನು ಮಂತ್ರಿ ಮಾಡುವಂತೆ ಯಾರಲ್ಲೂ ನಾನು ಭಿಕ್ಷೆ ಕೇಳಲ್ಲ. 38 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.
ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಹೋರಾಟದಲ್ಲಿ ಪಾಲ್ಗೊಂಡವರನ್ನು ಸಚಿವ ಸಂಪುಟದಿಂದ ಹೊರ ಹಾಕಿದ್ದಾರೆ. ನನ್ನನ್ನು ಹಾಗೂ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಇದೆಲ್ಲ ನೋಡಿದ್ರೆ ಇದಕ್ಕೆ ಪುಷ್ಠಿ ನೀಡುತ್ತದೆ. ಲಿಂಗಾಯತ ಧರ್ಮ ಪರ ಹೋರಾಟ ಮಾಡಿದ್ರಿಂದ ಕೆಲ ಸ್ವಾಮೀಜಿಗಳಿಂದ ಅಪಪ್ರಚಾರ ನಡೆಯಿತು. ಸಮಾಜದ ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹೋರಾಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ತಿಳಿಸಿದರು.
ನಾವು ಎಂದು ಜಾತಿ ಮಾಡಿದವರಲ್ಲ. ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದು ನಿಜ. ಎಲ್ಲರೂ ಮಾಡುವುದನ್ನು ನಾವು ಮಾಡಿದ್ದೇವೆ ನಾವೇನು ಕೊಲೆ, ದರೋಡೆ ಮಾಡಿಲ್ಲ. ಇದನ್ನೇ ತಪ್ಪು ಎಂದು ಭಾವಿಸಿದ್ದರೆ, ನಾವೇನು ಮಾಡೋಕೆ ಆಗಲ್ಲ. ಲಿಂಗಾಯತ ಧರ್ಮದ ಶಿಫಾರಸ್ಸು ಕೇಂದ್ರದಿಂದ ವಾಪಸ್ ಬಂದ ವಿಚಾರ. ಈ ಬಗ್ಗೆ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

Leave a Reply