– ಆದ್ರೂ ರಾಜ್ಯದ ಒಳಿತಿಗೆ ಸಹಿಸ್ಕೋತೀವಿ
ತುಮಕೂರು: ಸಮ್ಮಿಶ್ರ ಸರ್ಕಾರ ನಡೆಸೋದು ಕಠಿಣ ಅಂತಾ ಗೊತ್ತು. ಆದ್ರೂ ರಾಜ್ಯದ ಜನರ ಕಲ್ಯಾಣಕ್ಕಾಗಿ, ಎಲ್ಲರ ಒಳಿತಿಗಾಗಿ ಎಲ್ಲ ನೋವುಗಳನ್ನು ನುಂಗಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ 76ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ ಉಪ ಮುಖ್ಯಮಂತ್ರಿಗಳು, ಸರ್ಕಾರ ರಚನೆಯ ವೇಳೆಯಲ್ಲಿ ಜೆಡಿಎಸ್ ಗೆ ನಾವು ರಾಜಕೀಯವಾಗಿ ಷರತ್ತು ಹಾಕಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ರೂಪಿಸಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಅಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಂತರಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೂ ಸಮ್ಮಿಶ್ರ ಸರ್ಕಾರ ನಡೆಸೋದು ಕಠಿಣ. ರಾಜ್ಯದ ಆಡಳಿತದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಸರ್ಕಾರ ನಡೆಸುತ್ತಿದ್ದೇವೆ ಎಂದು ಮನದಾಳದ ಮಾತನ್ನು ಹೊರಹಾಕಿದರು.

ಆರ್‍ಎಸ್‍ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ಅವರಿಗೆ ಕ್ವಿಟ್ ಇಂಡಿಯಾ ಚಳವಳಿ ಗೊತ್ತೆ ಇಲ್ಲ. ಅಂತಹವರು ಕಾಂಗ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಆರ್‍ಎಸ್‍ಎಸ್ ನವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿಲ್ಲ ಅನ್ನೋದಕ್ಕೆ ನಮ್ಮಲ್ಲಿ ಪುರಾವೆಗಳಿವೆ. ಸ್ವಾತಂತ್ರ್ಯದ ಅರಿವಿಲ್ಲದ್ದವರು ಇಂದು ನಮ್ಮ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ. ನಮ್ಮ ಪಕ್ಷದ ಅಡಿಯಲ್ಲೇ ಸ್ಥಳೀಯ ಸಂಸ್ಥೆಯ ಚುನಾವಣೆ ಎದುರಿಸುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply