ಕನ್ನಡಿಗರನ್ನು ನಾನು ಹೃದಯದಲ್ಲಿ ಇರಿಸಿಕೊಂಡಿದ್ದೇನೆ- ವೆಂಕಯ್ಯನಾಯ್ಡು

ಮೈಸೂರು: ಕನ್ನಡಿಗರನ್ನು ನಾನು ಹೃದಯದಲ್ಲಿ ಇರಿಸಿಕೊಂಡಿರುವೆ. ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಆದರೆ ನಿಮ್ಮ ಮಾತು ಅರ್ಥವಾಗುತ್ತದೆ, ಕ್ಷಮಿಸಿ ಎಂದು ಕನ್ನಡದಲ್ಲೇ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 103ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೆಂಕಯ್ಯ ನಾಯ್ಡ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಜೆಎಸ್‍ಎಸ್ ದೊಡ್ಡ ಹೆಸರು ಮಾಡಿದೆ. ವೀರಶೈವ ಮಠಗಳು ಜಾತಿಯ ಭೇದವಿಲ್ಲದೆ ಶಿಕ್ಷಣ ನೀಡುತ್ತಿರುವುದು ಅವರ ದೊಡ್ಡತನ. ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯು 4 ಸಾವಿರ ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ನೀಡುತ್ತಿರುವ ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೆಎಸ್‍ಎಸ್ ಮಠ ಹಳ್ಳಿ-ನಗರದ ಅಂತರ ಕಡಿಮೆ ಮಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಿದೆ. ಜೊತೆಗೆ ಇತ್ತೀಚೆಗೆ ಮಹಾಮಳೆಗೆ ಸಿಲುಕಿದ ಕೊಡಗು ಸಂತ್ರಸ್ತರಿಗೆ 50 ಲಕ್ಷ ರೂ. ಸಹಾಯಧನ ನೀಡಿ ಮಠವು ಉದಾರತೆ ಮೆರದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಗೂಗಲ್ ಯಾವತ್ತೂ ಗುರುವಿಗೆ ಪರ್ಯಾಯವಲ್ಲ. ಗುರುಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದರು.

ಭಾರತವು ಮೊದಲು ವಿಶ್ವಗುರುವಾಗಿತ್ತು. ಶಿಕ್ಷಣ, ಸಂಸ್ಕೃತಿ, ಪರಂಪರೆ, ಧಾರ್ಮಿಕತೆ, ಅಭಿವೃದ್ಧಿ ಮೂಲಕ ಈಗ ಮತ್ತೆ ವಿಶ್ವಗುರು ಆಗುವ ಕಾಲ ಬರುತ್ತಿದೆ. ‘ಸರ್ವೇ ಜನ ಸುಖೀನೋಭವತು’ ಇದು ನಮ್ಮ ದೇಶದ ಶಕ್ತಿ. ಜಾತಿ ಎನ್ನುವುದು ಯಾವತ್ತಿಗೂ ಅನಿಷ್ಟ. ಟಿವಿ, ಸಿನಿಮಾ ನೋಡುತ್ತ ನಾವು ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ. ಮಾತೃಭೂಮಿ, ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ನೆನೆದು, ಪ್ರಧಾನಿ ಆಗಿದ್ದ ಅವರು ಹಾಸನ ಜಿಲ್ಲೆಯನ್ನು ಮರೆಯಲಿಲ್ಲ ಎಂದರು.

ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಪುಟ್ಟರಾಜು, ಪುಟ್ಟರಂಗಶೆಟ್ಟಿ, ಶಾಸಕರಾದ ಎಚ್.ವಿಶ್ವನಾಥ್, ಡಾ.ಯತೀಂದ್ರ, ಪಿ.ಜಿ.ಆರ್. ಸಿಂಧ್ಯಾ ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *