ನಾನು ಪ್ರತಿಕ್ರಿಯೆ ಕೊಡಲ್ಲ ನೀನ್ಯಾರು ಕೇಳೋಕೆ – ದರ್ಪ ಮೆರೆದ ನಾಡಗೌಡ

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಅಂಟಿಕೊಂಡ ಕಾಲುವೆ ಗೇಟ್ ದುರಸ್ಥಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ಕೇಳಿದಕ್ಕೆ ಮಾಧ್ಯಮಗಳ ವಿರುದ್ಧವೇ ಮಾಜಿ ಸಚಿವ ವೆಂಕಟರಾವ್ ನಾಡಗೌಡ ದರ್ಪ ಮೆರೆದಿದ್ದಾರೆ.

ಇಂದು ಕೊಪ್ಪಳ ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ವೆಂಕಟರಾವ್ ನಾಡಗೌಡ ಭೇಟಿ ಕೊಟ್ಟಿದ್ದರು. ಈ ವೇಳೆ ಕಾಲುವೆ ಗೇಟ್ ದುರಸ್ಥಿ ಪ್ರಕರಣ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದ್ದಕ್ಕೆ ಸಿಟ್ಟಾದ ನಾಡಗೌಡರು, ನಾನು ಪ್ರತಿಕ್ರಿಯೆ ಕೊಡಲ್ಲ ನೀನ್ಯಾರು ಕೇಳೋಕೆ? ದಿಸ್ ಇಸ್ ಮೈ ಡಿಸಿಶನ್ ಎಂದು ಹೇಳಿ ಕೆಂಡಾಮಂಡಲರಾಗಿದ್ದಾರೆ.

ಮಂಗಳವಾರ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿತ್ತು. ಹೀಗಾಗಿ ಬುಧವಾರದಿಂದ ಕಾಲುವೆ ಗೇಟ್ ರಿಪೇರಿ ಕಾರ್ಯವನ್ನು ಜಲಾಶಯದ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ನೀರಿನ ರಭಸದ ಹಿನ್ನಲೆಯಲ್ಲಿ ರಿಪೇರಿಗೆ ಅಡ್ಡಿಯಾಗುತ್ತಿದೆ. ಪರಿಣಾಮ ನೀರು ಊರಿನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಕಾಲುವೆ ಮೂಲಕ ಅಪಾರ ಪ್ರಮಾಣದ ನೀರು ಹೊರ ಬರುತ್ತಿದ್ದು, ಪಂಪಾವನ ಜಲಾವೃತಗೊಂಡಿದೆ. ಅಲ್ಲದೆ ಮುನಿರಾಬಾದ್ ಪ್ರದೇಶದ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಡಾರ್ಮೆಟರಿ, ರೈಲ್ವೇ ಕ್ವಾಟ್ರಾಸ್, ಉಸ್ಮಾನ್ ಶೇಖ್ ಕ್ಯಾಂಪ್ ಸೇರಿದಂತೆ ಅನೇಕ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ.

ಕೊಪ್ಪಳ ತಾಲೂಕಿನ ಮಟ್ಟಿ ಮುದ್ಲಾಪುರ ಗ್ರಾಮದ ಬಳಿಯ ನೂರಾರು ಎಕರೆ ಜಮೀನು ಕೂಡ ನೀರಿನಲ್ಲಿ ಮುಳುಗಿದೆ. ಹೀಗಾಗಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಹಾನಿಗೀಡಾಗಿದೆ. ಸುಮಾರು 300ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

Comments

Leave a Reply

Your email address will not be published. Required fields are marked *