ಸರ್ಕಾರ ಬರೋದು ಮುಖ್ಯವೇ ವಿನಃ ಮಂತ್ರಿಯಾಗಬೇಕೆಂಬ ಆಕಾಂಕ್ಷೆಯಿಲ್ಲ: ಕುಮಾರ್ ಬಂಗಾರಪ್ಪ

ರಾಮನಗರ: ನಮಗೆ ಸರ್ಕಾರ ಅಧಿಕಾರಕ್ಕೆ ಬರುವುದು ಮುಖ್ಯ. ರಾಜ್ಯದ ಹಾಗೂ ಪಕ್ಷದ ದೃಷ್ಟಿ ದೊಡ್ಡದಾಗಿರಬೇಕೇ ವಿನಃ ನಾವು ಮಂತ್ರಿಗಳಾಗಬೇಕೆಂಬ ಅಪೇಕ್ಷೆಯಿಲ್ಲ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಇಂದು ಕುಮಾರ್ ಬಂಗಾರಪ್ಪ ಭೇಟಿ ನೀಡಿ, ಬಿಎಸ್‍ವೈ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರು ಒಬ್ಬರು ಮಾತ್ರವೇ ಇಂದು ಪ್ರಮಾಣ ವಚನವನ್ನ ಸ್ವೀಕರಿಸುತ್ತಿದ್ದಾರೆ. ನಮಗೆ ಸರ್ಕಾರ ಅಧಿಕಾರಕ್ಕೆ ಬರುವುದು ಮುಖ್ಯ. ರಾಜ್ಯ ಹಾಗೂ ಪಕ್ಷದ ದೃಷ್ಟಿ ದೊಡ್ಡದಾಗಿರಬೇಕೆ ವಿನಃ ನಾವು ಮಂತ್ರಿಗಳಾಗಬೇಕೆಂಬ ಅಪೇಕ್ಷೆಯಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರ ಅನರ್ಹತೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಕೆಲವು ಪ್ರಕರಣಗಳು ಸ್ವೀಕರ್ ಮುಂದಿದೆ. ಕೆಲವು ವಿಚಾರಗಳು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿದೆ. ಇವೆಲ್ಲವೂ ಮೊದಲು ಇತ್ಯರ್ಥವಾಗಬೇಕು ಎಂದರು.

ಹಾಗೆಯೇ ಬಹುಮತದ ವಿಚಾರದ ಬಗ್ಗೆ ಮಾತನಾಡಿ, ಸಮ್ಮಿಶ್ರ ಸರ್ಕಾರ ಅತಂತ್ರ ಹಾಗೂ ಅಪವಿತ್ರವಾದ ಸರ್ಕಾರವಾಗಿತ್ತು, ಇದೀಗ ಅದು ಪತನವಾಗಿದೆ. ಬಹುಮತ ಸಾಬೀತು ಪಡಿಸಲಿಕ್ಕೆ ಅವರಿಗಿಂತಲೂ ನಾವು ಹೆಚ್ಚಿನ ಶಾಸಕರ ಬಲವನ್ನು ಹೊಂದಿದ್ದೇವೆ. ಅದು ಒಂದು ಸ್ಥಾನವಿರಬಹುದು, ಇಲ್ಲವೇ 50 ಸ್ಥಾನವಿರಬಹುದು ಅದನ್ನ ಸಾಬೀತು ಪಡಿಸುವ ಶಕ್ತಿ ಬಿಎಸ್‍ವೈ ಅವರಿಗೆ ಇದೆ. ಬಿಜೆಪಿ ನಾಯಕರೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಬಿಜೆಪಿ ವಿರುದ್ಧ ಮಾತನಾಡಿದ ಕೈ-ದಳ ನಾಯಕರಿಗೆ ತಿರುಗೇಟು ನೀಡಿದರು.

ಅಲ್ಲದೆ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆ ರೀತಿಯ ಪ್ರಸ್ತಾವನೆಗಳು ಇಲ್ಲಿಯ ತನಕ ನಡೆದಿಲ್ಲ. ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *