ಧಾರವಾಡ: ಯಾವ ಶಾಸಕರಲ್ಲೂ ಅಸಮಾಧಾನವಿಲ್ಲ ಅವರವರ ಕ್ಷೇತ್ರದಲ್ಲಿ ಕೆಲಸಗಳು ಆಗಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಂಬಂಧಪಟ್ಟ ಮುಖ್ಯಮಂತ್ರಿಗಳ ಜೊತೆ, ನನ್ನ ಜೊತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಟ್ರಬಲ್‍ಶೂಟರ್ ನಾನೇ ಎಂದು ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿಸಿ ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಗಾವಣೆ ಆಡಳಿತದಲ್ಲಿ ಒಂದು ಭಾಗ. ಆ ಭಾಗವಾಗಿ ವರ್ಗಾವಣೆ ನಡೆಯುತ್ತಿವೆ. ಅದು ಯಾವುದೇ ಶಿಕ್ಷೆಯಲ್ಲ. ಯಾವ ಅಧಿಕಾರಿ ಒಳ್ಳೆಯ ಕೆಲಸಮಾಡುತ್ತಾರೋ ಅವರನ್ನು ಗುರುತಿಸಿ ಅವರನ್ನು ವರ್ಗಾವಣೆ ಮಾಡುವುದು ಕಾನೂನಿನ ಅವಕಾಶವಾಗಿದೆ. ಹೀಗಾಗಿ ಅದು ಏನೂ ದೊಡ್ಡ ವಿಚಾರ ಅಲ್ಲ. ಅದು ಒಂದು ಪ್ರಕ್ರಿಯೆ ಎಂದು ಹೇಳಿದರು.

ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಆಫರ್ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ನನ್ನ ಬಳಿ ಹೇಳಿಕೊಂಡಿದ್ದರು. ನನಗೆ ಬಿಜೆಪಿಯಿಂದ ಆಹ್ವಾನ ಬರುತ್ತಿದೆ ಅಂತ ಮಾತ್ರ ಹೇಳಿಕೊಂಡಿದ್ದರು. ಹಣದ ಆಮಿಷದ ಬಗ್ಗೆ ಯಾವುದೇ ವಿಚಾರ ನನಗೆ ಹೇಳಿರಲಿಲ್ಲ. ಬಿಜೆಪಿಯವರು ಕರೆಯುತ್ತಿದ್ದಾರೆ ಅನ್ನೋದನ್ನು ಮಾತ್ರ ಗಮನಕ್ಕೆ ತಂದಿದ್ದರು. ಈಗ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದು, ಅವರು ಈ ಕುರಿತು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಪೊಲೀಸ್ ಅಧಿಕಾರಿಗಳ ಪ್ರಮೋಷನ್ ವಿಚಾರಕ್ಕೆ ಆಯಾ ಕಾಲಕ್ಕೆ ತಕ್ಕಂತೆ ಆಗಿದೆ. ಪ್ರಮೋಷನ್ ಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ತೀರ್ಮಾನವನ್ನು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಮೋಷನ್ ನಿಂತಿರಬಹುದೇ ಹೊರತು ಯಾವುದೇ ಬಡ್ತಿಯನ್ನು ನಿಲ್ಲಿಸುವುದಿಲ್ಲ. ಕಳೆದ ಬಾರಿ ಗೃಹ ಸಚಿವನಾಗಿದ್ದಾಗ 12 ಸಾವಿರ ಜನರಿಗೆ ಬಡ್ತಿ ಕೊಟ್ಟಿದ್ದೇನೆ. ಅದೇ ರೀತಿ ಈಗಲೂ ಬಡ್ತಿ ಪ್ರಕ್ರಿಯೆಯನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಇಲಾಖೆಯಿಂದ ನಿಲ್ಲಿಸಬಾರದೆಂದು ಆದೇಶಿದ್ದೇನೆ ಎಂದರು. ರಾಹುಲ್ ಗಾಂಧಿ ಬಗ್ಗೆ ಎಸ್ ಎಲ್ ಭೈರಪ್ಪ ಮೈಸೂರಿನಲ್ಲಿ ಹೇಳಿದ ವಿಚಾರಕ್ಕೆ ಅದು ಅವರವರ ಅಭಿಪ್ರಾಯವಷ್ಟೇ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply