ಜೆಡಿಎಸ್ ಪಕ್ಷ ನಾನು ಬಿಡ್ಲಿಲ್ಲ, ಅವರೇ ನನ್ನ ಹೊರಗೆ ಹಾಕಿದ್ರು: ಎಟಿ ರಾಮಸ್ವಾಮಿ

ಬೆಂಗಳೂರು: ಜೆಡಿಎಸ್‌ನ ಇನ್ನೊಂದು ವಿಕೆಟ್ ಪತನವಾಗಿದೆ. ನಿರೀಕ್ಷೆಯಂತೆ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಕಾರ್ಯದರ್ಶಿಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನಾನು ಬಿಡಲಿಲ್ಲ. ಅವರೇ ಹೊರೆಗೆ ಹಾಕಿದ್ರು. ನಾನು ಯಾವತ್ತು ಬಿಡ್ತೀನಿ ಅಂತ ಹೇಳಿಲ್ಲ. ಎಲ್ಲಾ ಪಕ್ಷದಲ್ಲಿ ಲೋಪದೋಷ ಇರುತ್ತವೆ. ನಾನು ಬಲಿಪಶುವಾದೆ. ಹಣದ ಮುಂದೆ ಬಲಿಪಶು ಆಗಿದ್ದೇನೆ. ಅಕ್ರಮವನ್ನು ಎತ್ತಿ ಹಿಡಿದಿದ್ದೇ ನನಗೆ ಮಾರಕವಾಗಿದೆ. ಅದನ್ನು ನಾನು ಸಂತೋಷವಾಗಿ ಸ್ವೀಕಾರ ಮಾಡುತ್ತೇನೆ ಅಂದರು. ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಫಿಕ್ಸಾ?

ವೈಯಕ್ತಿಕ ಲಾಭಕ್ಕೆ ಕೆಲಸ ಮಾಡಿಲ್ಲ. ಜನತ ಹಿತಾಸಕ್ತಿ ಕಾಪಾಡಿದ ತೃಪ್ತಿ ನನಗೆ ಇದೆ. ತಪ್ಪನ್ನು ತಪ್ಪು, ಸರಿಯನ್ನು ಸರಿ ಅಂತ ಹೇಳಿದ್ದೇನೆ. ವಿರೋಧಗಳು ಕೂಡಾ ನನ್ನ ಭಾವನೆಗೆ ಸಹಕಾರ ಕೊಟ್ಟಿವೆ. ನನ್ನ ಇವತ್ತಿನ ವಿರೋಧಿಗಳು ಉತ್ತಮ ಆಶಯದೊಂದಿಗೆ ಒಳ್ಳೆಯದು ಮಾಡಲಿ ಎಂದರು.

ಮುಂದಿನ ದಿನಗಳಲ್ಲಿ ನನ್ನ ನಡೆ ಬಗ್ಗೆ ಹೇಳುತ್ತೇನೆ. ಅನೇಕ ಜನರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಕಾಲಾಯ ತಸ್ಮೈ ನಮಃ. ಜನರಿಗಾಗಿ ಮತ್ತೆ ಚುನಾವಣೆಗೆ ನಿಲ್ಲಬೇಕು ಎಂಬ ಅಪೇಕ್ಷೆ ಇದೆ. ಅವಕಾಶ ಸಿಕ್ಕರೆ ನಿಲ್ಲುತ್ತೇನೆ. ಕಾಂಗ್ರೆಸ್ ಸೇರ್ಪಡೆ ಆಗೋ ಚರ್ಚೆ ಆಗಿದೆ. ಆದರೆ ಇನ್ನೂ ನಿರ್ಧಾರ ಆಗಿಲ್ಲ. ಆದಷ್ಟು ಬೇಗ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು