ನಾನು ಅಪೇಕ್ಷೆ ಪಟ್ಟಿರಲಿಲ್ಲ, ಪಕ್ಷ ನನ್ನನ್ನು ನಂಬಿ ಅಧಿಕಾರ ಕೊಟ್ಟಿದೆ: ನಳಿನ್ ಕುಮಾರ್

– ನೆಚ್ಚಿನ ನಾಯಕನನ್ನು ಹೆಗಲು ಮೇಲೆ ಹೊತ್ತ ಅಭಿಮಾನಿಗಳು

ಮಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ನಾನು ಅಪೇಕ್ಷೆ ಪಟ್ಟಿರಲಿಲ್ಲ, ಪಕ್ಷ ನನ್ನನ್ನು ನಂಬಿ ಅಧಿಕಾರ ಕೊಟ್ಟಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ನಮ್ಮ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ವಹಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರನ್ನು ಗುರುತಿಸುತ್ತಾರೆ. ಮೊದಲಿನಿಂದಲೂ ನಾನು ಆರ್‍ಎಸ್‍ಎಸ್‍ನಲ್ಲಿದ್ದೆ. ವೈಚಾರಿಕ ಆಧಾರದ ಮೇಲೆ ನಾನು ಪಕ್ಷಕ್ಕೆ ಸೇರಿ ರಾಜಕೀಯ ಪ್ರವೇಶಿಸಿದೆ. ಆಗಲೂ ಕೂಡ ಯಾವುದೇ ಅಪೇಕ್ಷೆ ಪಟ್ಟಿರಲಿಲ್ಲ. ಹಿರಿಯರು ಹೇಳಿದ್ದಕ್ಕೆ ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡೆ. ಈ ಬಾರಿ ಕೂಡ ನಾನು ಯಾವುದೇ ಅಪೇಕ್ಷೆ ಪಟ್ಟಿರಲಿಲ್ಲ, ಆದರೆ ಹಿರಿಯರೇ ಕರೆದು ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಇದೊಂದು ಸವಾಲಾಗಿದೆ. ಎಲ್ಲಾ ಹಿರಿಯ ನಾಯಕರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಪಕ್ಷವನ್ನು ಬಲಪಡಿಸುವ ಶಕ್ತಿ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.

ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ಬೆಳೆಸುವ ಪದ್ಧತಿ ಇದೆ. ಎಲ್ಲರೂ ಒಂದಾಗಿದ್ದು ಮಾರ್ಗದರ್ಶನ ಮಾಡುತ್ತಾರೆ. ಹೀಗಾಗಿ ಇಂದು ಕೊಟ್ಟಿರುವ ಜವಾಬ್ದಾರಿಗೆ ಎಲ್ಲಾ ಹಿರಿಯರು, ಕಿರಿಯರು ನಿಂತು ನನ್ನ ಬಳಿ ಈ ಕೆಲಸ ಮಾಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವು ತಂಡ ಮಾಡಿಕೊಂಡು ಕೆಲಸ ಮಾಡುತ್ತೇವೆ, ಯಾರೋ ಒಬ್ಬನೇ ಎಲ್ಲಾ ಕೆಲಸ ಮಾಡುವುದಿಲ್ಲ. ರಾಜಕೀಯದಲ್ಲಿ ಅಸಮಾಧಾನ ಸಾಮಾನ್ಯ, ಆದರೆ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಸಿಎಂ ಬಗ್ಗೆ ಮಾತನಾಡಿ, ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ಅವರಿಗೆ ಒಂದು ಗುರಿ ಹಾಗೂ ಯೋಚನೆ ಇದೆ. ಹಿಂದೆ ಅವರಿಗೆ ಅಧಿಕಾರ ಸಿಕ್ಕಾಗ ರಾಜ್ಯ ಹಿಂದೆಂದು ಕಂಡರಿಯದ ಅಭಿವೃದ್ಧಿ ತಂದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯ ಹಾಗೆ ಯಡಿಯೂರಪ್ಪ ಚಿಂತಿಸುತ್ತಾರೆ. ಹೀಗಾಗಿ ಖಂಡಿತ ಸಮಗ್ರ ಕರ್ನಾಟಕ ಕಲ್ಯಾಣ ಕರ್ನಾಟಕವಾಗುತ್ತೆ. ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹಾಡಿ ಹೊಗಳಿದರು.

ಕೊಚ್ಚಿಯಿಂದ ಮಂಗಳೂರಿಗೆ ಬಂದಿಳಿದ ನಳಿನ್ ಕುಮಾರ್ ಕಟೀಲ್ ಅವರಿಗೆ ರೈಲು ನಿಲ್ದಾಣದಲ್ಲಿಯೇ ಹಾರ ಹಾಕಿ, ಶಾಲು ಹೊದಿಸಿ ಅಭಿಮಾನಿಗಳು ಭುಜದ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಉನ್ನತ ಸ್ಥಾನ ದೊರಕಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿಯ ಸಿದ್ಧಾಂತದ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ಸಿಎಂ ಯಡಿಯೂರಪ್ಪ ಅವರಿಂದ ಹಿಂಪಡೆದಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *