ನಾವು 125 ಕೋಟಿ ಜನರನ್ನು ಜೊತೆಗೆ ಕರೆದುಕೊಂಡು ನವ ಭಾರತವನ್ನು ಮುಂದಕ್ಕೆ ಕರೆದೊಯ್ಯುತ್ತೇವೆ: ಮೋದಿ

ನವದೆಹಲಿ: ನಾವು 125 ಕೋಟಿ ಜನರನ್ನು ಜೊತೆಗೆ ಕರೆದುಕೊಂಡು ನವ ಭಾರತವನ್ನು ಮುಂದಕ್ಕೆ ಕರೆದೊಯ್ಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಭಾನುವಾರ ದೆಹಲಿಯಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳು ಭಾರತದ ಅಭಿವೃದ್ಧಿಗೆ ಶ್ರಮಿಸಿದೆ. ಈ ವಿಚಾರವನ್ನು ನಾವು ಮರೆಯುವಂತಿಲ್ಲ. ನಾನು ಚುನಾವಣೆಯ ಬಗ್ಗೆ ಯೋಚನೆ ಮಾಡುವುದಿಲ್ಲ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುತ್ತದೆ. 2022 ಬರಲು ಇನ್ನೂ 5 ವರ್ಷಗಳಿದೆ. 75 ವರ್ಷದ ಸಂಭ್ರಮದ ವೇಳೆ ಭಾರತ ಯಾವೂದರಲ್ಲೂ ಹಿಂದೆ ಉಳಿಯುವುದಿಲ್ಲ ಎಂದು ತಿಳಿಸಿದರು.

ಅಭಿವೃದ್ಧಿಯ ವಿಚಾರಗಳಿಗೆ  ಜನ ಮತ ಹಾಕುತ್ತಾರೆ ಎನ್ನುವುದು ಈ ಚುನಾವಣೆಯ ಫಲಿತಾಂಶ ಉತ್ತರ ನೀಡಿದೆ. ಈಗ ಅಭಿವೃದ್ಧಿಯ ಆಂದೋಲನ ಆರಂಭವಾಗಿದ್ದು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ. ಸರ್ಕಾರಕ್ಕೆ ಭೇದ ಭಾವ ಮಾಡುವ ಯಾವುದೇ ಹಕ್ಕಿಲ್ಲ. ಸರ್ಕಾರ ಎಲ್ಲರಿಗೂ ಇರುವಂತದ್ದು ಎಂದರು.

ಮತದಾರರಿಗೆ ಆಭಿನಂದನೆ: ನೀವು ಭರವಸೆ ಇಟ್ಟು ಬಿಜೆಪಿಗೆ ಮತ ನೀಡಿದ್ದೀರಿ. ಟಿವಿಯಲ್ಲಿ ಕಾಣಿಸದ, ಪತ್ರಿಕೆಯಲ್ಲಿ ಸುದ್ದಿ ಬರದೇ ಇರುವ ವ್ಯಕ್ತಿಗಳನ್ನೂ ನೀವು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸದನ್ನು ಕಲಿಯುವುದಿದ್ದರೆ ಕಲಿಯುತ್ತೇವೆ. ಹೊಸ ಅವಕಾಶಗಳು ಸಿಕ್ಕಿದಾಗಲೆಲ್ಲಾ ನವ ಭಾರತ ನಿರ್ಮಾಣಕ್ಕೆ ಸಿಗುವ ಅವಕಾಶ ಕೈ ಬಿಡುವುದಿಲ್ಲ ಎಂದು ಹೇಳಿದರು.

ಈ ಅಭೂತಪೂರ್ವ ಫಲಿತಾಂಶಕ್ಕೆ ಬರಲು ಕಾರಣರಾದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ತಂಡ ಮತ್ತು ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

Comments

Leave a Reply

Your email address will not be published. Required fields are marked *