ಮಹಿಳೆಯರೇ ಕ್ಷಮಿಸಿಬಿಡಿ, ಇನ್ಮುಂದೆ ಇಂತಹ ಮಾತುಗಳು ಮರುಕಳಿಸಲ್ಲ: ಡಿಕೆಶಿ ಕ್ಷಮೆ

ಬೆಂಗಳೂರು: ಅತ್ಯಾಚಾರವನ್ನು ಆನಂದಿಸಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆ ರಾಜ್ಯಾದ್ಯಂತ ಭಾರೀ ಕೋಲಾಹಲ ಎಬ್ಬಿಸಿತ್ತು. ಈ ಬೆನ್ನಲ್ಲೇ ಮಾಜಿ ಸ್ಪೀಕರ್ ಸದನದಲ್ಲಿಯೇ ಸಾರಿ ಕೆಳಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಕ್ಷಮೆಯಾಚಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಡಿಕೆಶಿ, ಕಾಂಗ್ರೆಸ್ ಶಾಸಕರು ಮಾಡಿರುವ ಪದ ಬಳಕೆ ಬಗ್ಗೆ ವಿಷಾದಿಸುತ್ತೇನೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರ ಬಳಿ ಕ್ಷಮೆ ಕೇಳುತ್ತೇನೆ. ಅಲ್ಲದೆ ಮತ್ತೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಖಚಿತಪಡಿಸುವುದಾಗಿ ತಿಳಿಸಿದ್ದಾರೆ.

ನಿನ್ನೆ ನಡೆದ ಕಲಾಪದಲ್ಲಿ ನಮ್ಮದೇ ಶಾಸಕರೊಬ್ಬರು ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮಹಿಳೆಯರ ವಿರುದ್ಧದ ಅಸಂವೇದನಾಶೀಲ ಹೇಳಿಕೆಗಳು ಲಿಂಗ ಸಮಾನತೆಯ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿರುವ ನನಗೆ ಕಾಂಗ್ರೆಸ್ ಶಾಸಕರೊಬ್ಬರು ಇಂತಹ ಮಾತುಗಳನ್ನು ಆಡಿದ್ದಕ್ಕೆ ಅತೀವ ಬೇಸರವಾಗಿದೆ. ಕರ್ನಾಟಕದ ಎಲ್ಲಾ ಮಹಿಳೆಯರು ಕ್ಷಮಿಸಿ ಬಿಡಿ. ಅಲ್ಲದೆ ಈ ರೀತಿಯ ಮಾತುಗಳು ಎಂದಿಗೂ ಪುನರಾವರ್ತನೆಯಾಗದಂತೆ ನಾನು ಖಚಿತಪಡಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಗದಿದ್ರೆ ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಈ ರೀತಿ ಹೇಳುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು.

ಇತ್ತ ಸದನದಲ್ಲಿ ನೀಡಿರುವ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯದ ಜನರ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸ್ಪೀಕರ್, ‘ಅತ್ಯಾಚಾರ’ ಸಂಬಂಧ ಅಧಿವೇಶನದಲ್ಲಿ ನೀಡಿರುವ ನನ್ನ ಹೇಳಿಕೆ ಕುರಿತು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ನನ್ನ ಉದ್ದೇವಾಗಿರಲಿಲ್ಲ. ಮಾತಿನ ಭರದಲ್ಲಿ ಆ ಮಾತು ಬಂದಿದೆ. ಇನ್ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *