‘ನಾನು ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕಾಲ್ ಮಾಡ್ಬೇಡಿ’

ನವದೆಹಲಿ: ನಾನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕರೆ ಮಾಡಬೇಡಿ ಎಂದು ದೆಹಲಿಯ ಪೀತಮಪುರದ ಯುವಕ ಪುನೀತ್ ಅಗ್ರವಾಲ್ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾನೆ. ಈ ರೀತಿಯ ಕರೆಗಳಿಂದ ಬೇಸತ್ತಿರುವ ಪುನೀತ್ ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದಾರೆ. ಅರ್ಜುನ ಪಟಿಯಾಲಾ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ತಿಳಿಸುತ್ತಾರೆ. ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದ್ರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ಎಂದು ಪುನೀತ್ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶುಕ್ರವಾರ ಅರ್ಜುನ ಪಟಿಯಾಲಾ ಸಿನಿಮಾ ಬಿಡುಗಡೆಯಾಗಿದ್ದು, ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ನಾನು ಸ್ವೀಕರಿಸಿದ್ದೇನೆ. ಆದ್ರೆ ಎಲ್ಲ ಕರೆಗಳಿಗೂ ನಾನು ಸನ್ನಿ ಲಿಯೋನ್ ಅಲ್ಲ ಎಂದು ಹೇಳುತ್ತಿದ್ದೇನೆ. ಮೊಬೈಲ್ ನಂಬರ್ ಬಳಸುವ ಮುನ್ನ ಚಿತ್ರತಂಡ ನನ್ನ ಅನುಮತಿ ಪಡೆದುಕೊಂಡಿಲ್ಲ ಎಂದು ಪುನೀತ್ ಆರೋಪಿಸಿದ್ದಾರೆ.

ಕರೆ ಮಾಡಿದ ಬಹುತೇಕರು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಭೇಟಿಗೆ ಒಪ್ಪದಿದ್ದರೆ ನಿಂದಿಸಲು ಆರಂಭಿಸುತ್ತಾರೆ. ಮಾನಸಿಕವಾಗಿ ನೊಂದ ಪುನೀತ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಸಹ ಸೈಬರ್ ತಜ್ಞರ ಸಲಹೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂದು ಡಿಸಿಪಿ ವಿಜಯಂತ್ ಆರ್ಯ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *