ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಯ್ತು ಸರ್ಕಾರಿ ಅಧಿಕಾರಿಯ ಟೇಬಲ್‌ ಬೋರ್ಡ್‌

ಹಾಸನ: ‘ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ’ ಎಂದು ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ಟೇಬಲ್‌ ಬೋರ್ಡ್‌ ಹಾಕಿರುವ ದೃಶ್ಯದ ಫೋಟೋ ಎಲ್ಲೆಡೆ ವೈರಲ್‌ ಆಗಿದೆ.

ಹಾಸನ (Hassan) ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್‌ ತಮ್ಮ ಟೇಬಲ್‌ ಮೇಲೆ ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಬೋರ್ಡ್‌ ಹಾಕಿರುವುದು ಗಮನ ಸೆಳೆದಿದೆ. ಲೋಕೇಶ್‌ ಅವರು ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿದ್ದರು. ಇದನ್ನೂ ಓದಿ: ರಾಜ್ಯಕ್ಕೆ ಉತ್ತಮ ಮಳೆಯಾಗಲೆಂದು ಹಾಸನಾಂಬೆಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ ಸಿಎಂ

ಕಳೆದ ಅವಧಿಯಲ್ಲಿ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನೂ ಪಡೆದಿದ್ದರು. ತಮ್ಮ ವಿರುದ್ಧ ಆರೋಪಗಳು ಕೇಳಿ ಬರುವ ಅವಕಾಶ ನೀಡದಂತೆ ಕಾರ್ಯನಿರ್ವಹಿಸುತ್ತ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚಿಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಲೋಕೇಶ್‌ ಅವರು ಬಡ್ತಿ ಹೊಂದಿದ್ದಾರೆ. ತಾವು ಪ್ರಾಮಾಣಿಕ ಎಂದು ಎದೆತಟ್ಟಿ ಹೇಳಿಕೊಳ್ಳುವ ಧೈರ್ಯ ಪ್ರದರ್ಶನ ಮಾಡಿದ್ದಾರೆ. ಲೋಕೇಶ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಸಿಎಂ ಕೊಟ್ಬಿಡಿ: ಈಶ್ವರಪ್ಪ ವ್ಯಂಗ್ಯ

ಸರ್ಕಾರಿ ಅಧಿಕಾರಿಗಳು ಎಂದರೆ ಭ್ರಷ್ಟಚಾರಿಗಳು ಎಂಬ ಅಭಿಪ್ರಾಯಗಳೇ ಹೆಚ್ಚು. ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳು ಲೋಕಾಯುಕ್ತ ಕೈಗೆ ಸಿಕ್ಕಿ ಬೀಳುವ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ. ಇಂತಹ ಸನ್ನಿವೇಶದಲ್ಲಿ ಅಲ್ಲಿ ಇಲ್ಲಿ ಬೆರಳೆಣಿಕೆಯಷ್ಟು ಪ್ರಾಮಾಣಿಕ ಅಧಿಕಾರಿಗಳು ಸಿಗುತ್ತಾರೆ. ಅಂತಹವರ ಸಾಲಿಗೆ ಲೋಕೇಶ್‌ ಅವರು ಸೇರಿದ್ದಾರೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಲೋಕೇಶ್‌ ಅವರ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.