ಕೆ.ಆರ್.ಪೇಟೆ ಅಖಾಡದಲ್ಲಿ ನಿಖಿಲ್ ವಿರುದ್ಧ ಫೈಟ್‍ಗೆ ಅಭಿಷೇಕ್ ಬ್ರೇಕ್

ಬೆಂಗಳೂರು: ಕೆ.ಆರ್.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಬೇಕು ಎಂಬ ಅಭಿಮಾನಿಗಳ ಮನವಿಗೆ ಅಭಿಷೇಕ್ ಅಂಬರೀಶ್ ತಡೆ ಒಡ್ಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ನಿಖಿಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಅಭಿಷೇಕ್ ಸ್ಪರ್ಧೆ ಮಾಡಬೇಕು. ಮಂಡ್ಯದ ಜನರು ಸ್ವಾಭಿಮಾನಿಗಳು ಎಂದು ಮತ್ತೆ ಸಾಬೀತು ಮಾಡೋಣ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂಬ ಸಂದೇಶವನ್ನು ಅಭಿಷೇಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಕೇಳಿ ಬರುತ್ತಿದ್ದಂತೆ ಕೆಲವರು ಅಭಿಷೇಕ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನತೆ ಕಂಡ ರೋಚಕ ಫೈಟ್ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲೂ ಆಗಬೇಕು ಎಂಬುದು ಅಭಿಷೇಕ್ ಅಭಿಮಾನಿಗಳ ಇಚ್ಛೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರೋಚಕ ಫೈಟ್ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ಬಿಲ್ ಕುಲ್ ಆಗಲ್ಲ ಎಂದು ಅಭಿಷೇಕ್ ಬ್ರೇಕ್ ಹಾಕಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅಭಿಷೇಕ್ ಅವರು, ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ. ಆದರೆ ಅಮ್ಮ ರಾಜಕಾರಣದಲ್ಲಿ ಇರುವವರೆಗೂ ರಾಜಕೀಯ ಪ್ರವೇಶ ಮಾಡಲ್ಲ. ಕೆ.ಆರ್.ಪೇಟೆ ಉಪ ಚುನಾವಣೆಗೆ ಸ್ಪರ್ಧೆಯ ಬಗ್ಗೆ ಯೋಚಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಮೂಲಕ ಕೆ.ಆರ್.ಪೇಟೆ ಅಖಾಡದಲ್ಲಿ ನಿಖಿಲ್ ವರ್ಸಸ್ ಅಭಿಷೇಕ್ ಫೈಟ್‍ಗೆ ಬ್ರೇಕ್ ಹಾಕಿದ್ದಾರೆ. ಆದರೂ ಅಂಬರೀಶ್ ಹಾಗೂ ಅಭಿಷೇಕ್ ಬೆಂಬಲಿಗರು ಅಂತದೊಂದು ಫೈಟ್‍ಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *