ನಾನು ಹಿಂದೂ ವಿರೋಧಿಯಲ್ಲ ಮೋದಿ ವಿರೋಧಿ, ಅಮಿತ್ ಶಾ ವಿರೋಧಿ, ಹೆಗ್ಡೆ ವಿರೋಧಿ- ಪ್ರಕಾಶ್ ರೈ

ಹೈದರಾಬಾದ್: ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ನಾನು ಹಿಂದೂ ವಿರೋಧಿಯಲ್ಲ, ಆದರೆ ಮೋದಿ ವಿರೋಧಿ, ಅಮಿತ್ ಶಾ ವಿರೋಧಿ, ಹೆಗ್ಡೆ ವಿರೋಧಿ ಎಂದು ಹೇಳಿದ್ದಾರೆ.

ಹೈದರಾಬಾದ್‍ನಲ್ಲಿ ನಡೆದ ಇಂಡಿಯಾ ಟುಡೆ ಸೌತ್ ಕಾನ್‍ಕ್ಲೇವ್ ನಲ್ಲಿ ಮಾತನಾಡಿದ ಅವರು, ನಾನು ಹಿಂದೂ ವಿರೋಧಿ ಎಂದು ಹೇಳ್ತಾರೆ. ಇಲ್ಲ, ನಾನು ಮೋದಿ ವಿರೋಧಿ, ನಾನು ಹೆಗ್ಡೆ ವಿರೋಧಿ, ನಾನು ಅಮಿತ್ ಶಾ ವಿರೋಧಿ. ನನ್ನ ಪ್ರಕಾರ ಅವರು ಹಿಂದೂಗಳಲ್ಲ. ಕೊಲ್ಲುವುದನ್ನು ಬೆಂಬಲಿಸುವ ವ್ಯಕ್ತಿ ಹಿಂದೂ ಅಲ್ಲ ಎಂದರು.

ಈ ವೇಳೆ ತೆಲಂಗಾಣ ಬಿಜೆಪಿ ವಕ್ತಾರರಾದ ಕೃಷ್ಣ ಸಾಗರ್ ರಾವ್ ಎದ್ದು ನಿಂತು ಮೋದಿ ಹಾಗೂ ಶಾ ವಿರುದ್ಧ ಹೇಳಿಕೆ ನೀಡಿದ್ದನ್ನು ಖಂಡಿಸಿದ್ರು. “ನೀವು ಮಾತನಾಡಿದಾಗ ವಾಕ್ ಸ್ವಾತಂತ್ರ್ಯ, ಅವರು ಮಾತನಾಡಿದಾಗ ಮತೀಯತೆ” ಎಂದು ಕೃಷ್ಣ ಸಾಗರ್ ರಾವ್ ಪ್ರಶ್ನಿಸಿದ್ರು.

ಕಾರ್ಯಕ್ರಮದಲ್ಲಿ ಪ್ರಕಾಶ್ ರೈ, ಪದ್ಮಾವತ್ ಸಿನಿಮಾವನ್ನ ನಿಷೇಧಿಸಿರೋ ರಾಜ್ಯ ಸರ್ಕಾರಗಳು ಹಾಗೂ ಸಂಘಟನೆಗಳ ಮೇಲೂ ವಾಗ್ದಾಳಿ ನಡೆಸಿದ್ರು. ಈ ರಾಜ್ಯ ಸರ್ಕಾರಗಳು ಕೆಳಗಿಳಿಯಬೇಕು. ಯಾಕಂದ್ರೆ ಮೊದಲು ಅವುಗಳು ಅಲ್ಲಿರಲು ಯಾವ ಅರ್ಹತೆಯೂ ಇಲ್ಲ ಅಂದ್ರು.

ಅಲ್ಲದೆ ಕೆಲವು ದಿನಗಳ ಹಿಂದೆ ಶಿರಸಿಯ ಕಾರ್ಯಕ್ರಮವೊಂದರಲ್ಲಿ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಮಾತನಾಡಿದ್ದಕ್ಕೆ, ವೇದಿಕೆಯನ್ನು ಗೋಮೂತ್ರ ಹಾಕಿ ಸ್ವಚ್ಛ ಮಾಡಿದ ಬಗ್ಗೆಯೂ ಪ್ರಕಾಶ್ ರೈ ಪ್ರಸ್ತಾಪ ಮಾಡಿದ್ರು. ಮೋದಿ ಹೆಗ್ಡೆಗೆ ಮಾತನಾಡಲು ಬಿಡಬಾರದು ಎಂದು ಹೇಳಿದ್ರು.

ಈ ಜಗತ್ತಿನಿಂದ ಒಂದು ಧರ್ಮವನ್ನು ಅಳಿಸಿಹಾಕಿಬಿಡುತ್ತೇನೆ ಅಂತ ಹೇಳಬಾರದು ಎಂದು ಪ್ರಧಾನಿ ತನ್ನ ಚುನಾಯಿತ ಸಚಿವರಿಗೆ ಹೇಳಬೇಕು. ಇದು ಹಿಂದುತ್ವವಲ್ಲ. ಪ್ರಧಾನಿ ತನ್ನ ಮಂತ್ರಿಗೆ ಬಾಯಿಮುಚ್ಚಿಕೊಂಡಿರಲು ಹೇಳದಿದ್ರೆ, ನಾನು ಪ್ರಧಾನಿಗೆ ಕೇಳ್ತಿದ್ದೀನಿ, ನೀವೂ ಹಿಂದೂ ಅಲ್ಲ ಎಂದು ರೈ ಹೇಳಿದ್ರು.

Comments

Leave a Reply

Your email address will not be published. Required fields are marked *