ಭಾರೀ ಮಳೆಯಲ್ಲೂ ಟ್ರಾಫಿಕ್ ಕ್ಲೀಯರ್ ಮಾಡಿ ಕರ್ತವ್ಯ ಮೆರೆದ ಪೊಲೀಸರು! – ಫೋಟೋ ವೈರಲ್

ಹೈದರಾಬಾದ್: ರಾಜ್ಯದೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರತಿದಿನ ಸಂಚರಿಸುವ ಜನರ ಜೀವನ ಅಸ್ಥವ್ಯಸ್ತವಾಗಿದೆ.

ಪ್ರತಿ ಬಾರಿಯೂ ಮಳೆಯಿಂದಾಗಿ ಹೈದರಾಬಾದ್‍ನಲ್ಲಿ ಟ್ರಾಫಿಕ್ ಸಿಗ್ನಲ್ಸ್, ಪ್ರವಾಹದಿಂದ ಕೂಡಿದ ಬೀದಿಗಳು ಮತ್ತು ಮರಗಳು ಉರುಳಿ ಬೀಳುತ್ತವೆ. ಆದರೆ ಹೈದರಾಬಾದ್ ನ ಮುನಿಸಿಪಲ್ ಕಾರ್ಪೋರೇಷನ್ ಸಿಬ್ಬಂದಿ(ಜಿಎಚ್‍ಎಮ್‍ಸಿ) ಮತ್ತು ಟ್ರಾಫಿಕ್ ಪೊಲೀಸರು ಮಳೆಯಲ್ಲಿಯೂ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.

ಗುರುವಾರ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹೈದರಾಬಾದ್ ನಲ್ಲಿ ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದವು. ಇದರಿಂದ ಮಳೆಯ ನೀರು ರಸ್ತೆಯಲ್ಲಿಯೇ ತುಂಬಿ ಕೊಂಡಿತ್ತು. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದ್ದು, ಅತಿಯಾದ ಟ್ರಾಫಿಕ್ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಬಂದು ರಸ್ತೆಯಲ್ಲಿದ್ದ ಮಳೆನೀರು ಹೋಗಲು ಒಳಚರಂಡಿ ಮುಚ್ಚಳಗಳನ್ನು ತೆರೆಯುವುದು ಮತ್ತು ಮಳೆಯಿಂದ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವುದರ ಮೂಲಕ ಟ್ರಾಫಿಕ್ ನನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.

ವ್ಯಕ್ತಿಯೊಬ್ಬರು ಪೊಲೀಸರು ಮಳೆಯಲ್ಲಿಯೂ ತಮ್ಮ ಕರ್ತವ್ಯ ಮಾಡುತ್ತಿದ್ದ ಫೋಟೋವನ್ನು ತೆಗೆದು ಅದನ್ನು ಇಲಾಖೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಟ್ವಿಟ್ಟರ್ ಬಳಕೆದಾರರು ಪೊಲೀಸರ ಕರ್ತವ್ಯದ ಬಗ್ಗೆ ಕಾಮೆಂಟ್ ಗಳನ್ನು ಮಾಡಿದ್ದಾರೆ. “ನಿಮ್ಮ ಬಗ್ಗೆ ನಮಗೆ ಬಹಳ ಹೆಮ್ಮೆ. ನಮ್ಮ ಪುರಸಭೆಯ ನೌಕರರು ನಿಮ್ಮಿಂದ ಕಲಿಯಬೇಕು” ಎಂದು ಟ್ವೀಟ್ ಮಾಡಿದ್ದಾರೆ.

`ಸಂಚಾರವನ್ನು ತೆರವುಗೊಳಿಸಿ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಮಾಡುವುದು ನಮ್ಮ ಕರ್ತವ್ಯ. ಆದ್ದರಿಂದ ನಾವು ಕಾರ್ಪೋರೇಷನ್ ಸಿಬ್ಬಂದಿ ತಂಡಗಳಂತಹ ಇತರ ಇಲಾಖೆಗಳಿಗೆ ಕಾಯುವುದಿಲ್ಲ. ವಾಹನ ಸವಾರರಿಗೆ ಬಿಕ್ಕಟ್ಟು ಉಂಟಾಗುವ ಮೊದಲು ನಾವು ರಸ್ತೆಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತೇವೆ. ಇದಕ್ಕಾಗಿ ತಾವು ಎಲ್ಲ ಅಧಿಕಾರಿಗಳನ್ನು ಸಜ್ಜುಗೊಳಿಸುತ್ತೇವೆ” ಎಂದು ಹೈದರಾಬಾದ್ ಟ್ರಾಫಿಕ್ ಪೊಲೀಸ್ ಹೆಚ್ಚುವರಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.

ಸಿಕಂದರಾಬಾದ್, ಮುಶೀರಾಬಾದ್ ಮುಂತಾದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು. ಮುಂದಿನ ಎರಡು ದಿನಗಳಲ್ಲಿ ರಾಜ್ಯಾದ್ಯಂತ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Comments

Leave a Reply

Your email address will not be published. Required fields are marked *