ಸಿಲ್ಲಿ ಕಾರಣಕ್ಕೆ 3 ವರ್ಷದ ಮಗಳನ್ನ ಕೊಂದೇ ಬಿಟ್ಟ!

ಹೈದರಾಬಾದ್: ಕುಡುಕ ತಂದೆಯೋರ್ವ ಮೂರು ವರ್ಷದ ಹೆಣ್ಣು ಮಗುವನ್ನು ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಒತ್ತಿ ಕೊಲೆ ಮಾಡಿರೋ ಘಟನೆ ಹೈದ್ರಾಬಾದ್‍ನಲ್ಲಿ ನಡೆದಿದೆ.

ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡೋ ಸುರೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಸುರೇಶ್ ತನ್ನ ಪತ್ನಿ ಜ್ಯೋತಿಯೊಂದಿಗೆ ಜಗಳವಾಡಿದ್ದು, ಬಳಿಕ 3 ವರ್ಷದ ಮಗಳು ಕೀರ್ತಿಯನ್ನ ಕರದಿದ್ದಾನೆ. ಆದ್ರೆ ಕರೆದಾಗ ಮಗಳು ಹತ್ತಿರ ಬರಲಿಲ್ಲ ಎಂಬ ಕೋಪಕ್ಕೆ ಮಗುವನ್ನು ಹೊಡೆದು, ಗೋಡೆಗೆ ತಲೆಯನ್ನ ಹಿಡಿದು ಒತ್ತಿದ್ದಾನೆ. ಈ ವೇಳೆ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದ್ದು, ಜ್ಞಾನ ತಪ್ಪಿದೆ. ಬಳಿಕ ಸುರೇಶ್ ಮಗುವನ್ನು ಹತ್ತಿರದ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಆಗಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೀರ್ತಿ ಮೊದಲೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ದೇಹದಲ್ಲಿ ಶಕ್ತಿ ಇರಲಿಲ್ಲ. ಹೀಗಾಗಿ ಗೋಡೆಗೆ ಒತ್ತಿ ಹಿಡಿದಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿರೋದಾಗಿ ಇಲ್ಲಿನ ಪೊಲೀಸ್ ಅಧಿಕಾರಿ ಎಸ್ ವೆಂಕಟ್ ರೆಡ್ಡಿ ಹೇಳಿದ್ದಾರೆ.

ಮಗು ಸಾವನ್ನಪ್ಪಿರುವುದು ತಿಳಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಮೂರು ವರ್ಷದ ಕೀರ್ತಿ ತಂದೆ ಸುರೇಶ್ ಜೊತೆ ಅಷ್ಟೊಂದು ಅನ್ಯೋನ್ಯವಾಗಿರಲಿಲ್ಲ. ಇದರಿಂದ ಸುರೇಶ್‍ಗೆ ಕೋಪ ಬರುತ್ತಿತ್ತು. ಈ ಮಗು ನನ್ನದಲ್ಲ ಅಂತಾ ಪತ್ನಿ ಜೊತೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಮೂರು ವರ್ಷಗಳ ಹಿಂದೆ ಸುರೇಶ್ ಜ್ಯೋತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಮದುವೆಗೆ ಮುಂಚೆಯೇ ಇವರಿಗೆ ಮಗುವಾಗಿತ್ತು ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *