ಕಾಲೇಜು ಸಿಬ್ಬಂದಿ ಕಿರುಕುಳ- ದಂತ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಹೈದರಾಬಾದ್: ಕಾಲೇಜು ಸಿಬ್ಬಂದಿ ಕಿರುಕುಳ ತಾಳಲಾರದೇ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಮಿರ್ಜಾ ಅಸಿಂ ಅಹ್ಮದ್ ಬೇಗ್ (33) ಮೃತ ವಿದ್ಯಾರ್ಥಿ. ಹೈದರಾಬಾದಿನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಮಿರ್ಜಾ ಅಸಿಂ ಕಾಲೇಜು ಸಿಬ್ಬಂದಿ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನಡೆದದ್ದು ಏನು?
ಸೋಮವಾರ ಮಿರ್ಜಾ ಅಸಿಂ ಕಾಲೇಜಿಗೆ ಹೋಗದೆ ಮನೆಯಲ್ಲಿ ಉಳಿದಿದ್ದರು. ಸಂಜೆ ರೂಮ್ ಒಳಗೆ ಹೋದ ಅವರು ಬಹಳ ಸಮಯ ಕಳೆದೂ ಹೊರಗೆ ಬರಲಿಲ್ಲ. ಇದರಿಂದ ಅನುಮಾನ ವ್ಯಕ್ತಪಡಿಸಿದ ಮಿರ್ಜಾ ಅಸಿಂ ಸಹೋದರ ಬಾಗಿಲು ಮುರಿದು ನೋಡಿದಾಗ, ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿರುವುದು ತಿಳಿದಿದೆ ಎಂದು ಇನ್‍ಸ್ಪೆಕ್ಟರ್ ನಾಗೇಶ್ ಹೇಳಿದ್ದಾರೆ.

ಮಿರ್ಜಾ ಮೃತ ದೇಹವನ್ನು ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಇತ್ತ ರೂಮ್‍ನಲ್ಲಿ ಡೆತ್ ನೋಟ್ ದೊರತಿದ್ದು, ತಮ್ಮ ಸಾವಿಗೆ ಕಾಲೇಜು ಸಿಬ್ಬಂದಿಯೇ ಕಾರಣವೆಂದು ಮಿರ್ಜಾ ಬರೆದಿದ್ದಾರೆ ಎಂದು ನಾಗೇಶ್ ಮಾಹಿತಿ ನೀಡಿದ್ದಾರೆ.

ಮಿರ್ಜಾ ಅಸಿಂ ಕಾಲೇಜು ಶುಲ್ಕ ಪಾವತಿಸಿಲ್ಲವೆಂದು ಪರೀಕ್ಷೆಯಲ್ಲಿ ಫೇಲ್ ಮಾಡಲಾಗಿತ್ತು. ಜೊತೆಗೆ ಶುಲ್ಕ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿತ್ತು ಎಂದು ಸಹೋದರ ಆರೋಪಿಸಿದ್ದಾರೆ.

ನಾವು ಮಿರ್ಜಾ ಅಸಿಂ ಬಗ್ಗೆ ಯಾವುದೇ ರೀತಿಯ ನಿಷ್ಕಾಳಜಿ ತೋರಿಲ್ಲ ಹಾಗೂ ಕಿರುಕುಳ ನೀಡಿಲ್ಲ ಎಂದು ಕಾಲೇಜು ಆಡಳಿತಾಧಿಕಾರಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ.

ಮಿರ್ಜಾ ಕಳೆದ ಕೆಲವು ವಾರಗಳಿಂದ ಮಂಕಾಗಿದ್ದರು. ಅಲ್ಲದೆ ಕಾಲೇಜು ಪರೀಕ್ಷೆಗೂ ಹಾಜರಾಗಿರಲಿಲ್ಲ. ಹೀಗಾಗಿ ಫೇಲ್ ಆಗಿದ್ದಾರೆ. ಅವರು ಓದುವುದರಲ್ಲಿ ಶ್ರದ್ಧೆ ಹೊಂದಿದ್ದರಿಂದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ನೀಡಿದ್ದೇವೆ ಎಂದು ಕಾಲೇಜು ಪ್ರಾಚಾರ್ಯ ಪಿ.ಕರುಣಾಕರ್ ವಿವರಿಸಿದ್ದಾರೆ.

ನಾವು ಅವರಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದೇವೆ. ಆದರೆ ಈ ವರ್ಷ ಮಿರ್ಜಾ ಮಾನಸಿಕವಾಗಿ ಕುಗ್ಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಕಾಲೇಜು ಹೆಸರನ್ನು ಏಕೆ ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು.

ಈ ಕುರಿತು ಮದನ್ನಪೇಟ್ ಪೊಲೀಸ್ ಠಾಣೆಯಲ್ಲಿ ಕಾಲೇಜು ಸಿಬ್ಬಂದಿ ವಿರುದ್ಧ ಐಪಿಸಿ 306 (ಆತ್ಮಹತ್ಯೆಗೆ ಪ್ರೇರಣೆ) ಅಡಿ ಪ್ರಕರಣ ದಾಖಲಾಗಿದೆ. ಕಾಲೇಜು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ, ತನಿಖೆಯನ್ನು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *